ಹುಬ್ಬಳ್ಳಿ: ಇದು ಯು ಟರ್ನ್ ಸರ್ಕಾರ ಎಂಬ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಇಎಂ ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಈ ಹಿಂದೆ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು ಈಗ ರಾಜಕೀಯ ಕಾರಣಕ್ಕಾಗಿ ವಿರುದ್ಧವಾಗಿ ಮಾತನಾಡುತ್ತಾರೆ ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ರಾಜಕಾರಣಕ್ಕಾಗಿ ವಕ್ಫ್ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟೀಸ್ ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟೀಸ್ ನೀಡಲಾಗಿದೆ ಎಂದು ಜನರಿಗೆ ಅರ್ಥವಾಗಿದೆ. ಹಿಂದೆ ಬೊಮ್ಮಾಯಿ ವಕ್ಫ್ ಆಸ್ತಿ ಕಾಪಾಡುವುದಾಗಿ ಹೇಳಿದವರು ಈಗ ರಾಜಕಾರಣಕ್ಕಾಗಿ ಅವರೇ ಯು ಟರ್ನ್ ಹೊಡೆಯಬಹುದಾ? ಈ ಥರ ಡಬಲ್ ಗೇಮ್ ಆಡಬಹುದಾ? ಎಂದು ಪ್ರಶ್ನಿಸಿದರು.
ನಾನು ಸಚಿವರಾದ ಹೆಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ ಅವರೊಂದಿಗೆ ಸಭೆ ನಡೆಸಿ ಯಾವುದೇ ನೋಟೀಸ್ ನೀಡಿದ್ದಲ್ಲಿ ಅದನ್ನು ವಾಪಸ್ಸು ಪಡೆಯಬೇಕು ಅಥವಾ ವಿಚಾರಣೆ ಇಲ್ಲದೆಯೇ ಯಾವುದಾದರೂ ಪಹಣಿ ದಾಖಲೆ ಬದಲಾವಣೆಯಾಗಿದ್ದರೆ ಅದನ್ನು ರದ್ದು ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾಗಿದೆ. ಮುಸ್ಲಿಂ , ಹಿಂದೂ, ಕ್ರಿಶ್ಚಿಯನ್ ಆಗಿರಲಿ, ಒಕ್ಕಲೆಬ್ಬಿಸಬಾರದು ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟೀಸ್ ಹಿಂಪಡೆಯಲಾಗಿದೆ . ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸ್ ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ ಎಂದು ಕೇಳಿದರು.
ವಕ್ಫ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರೆ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದರು.