ತ್ರಿಶೂರ್: ಕೇರಳದ ತ್ರಿಶೂರ್ ಪೂರಂ ದಿನದಂದು ಆಂಬ್ಯುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ದೂರು ದಾಖಲಿಸಲಾಗಿದೆ.
ಈ ವರ್ಷದ ಏಪ್ರಿಲ್ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವದ ವೇಳೆ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಇತರ ಇಬ್ಬರ ವಿರುದ್ಧ ಆಂಬ್ಯುಲೆನ್ಸ್ ಅನ್ನು “ದುರುಪಯೋಗಪಡಿಸಿಕೊಂಡ” ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಅಭಿಜಿತ್ ನಾಯರ್ ಮತ್ತು ಆಂಬ್ಯುಲೆನ್ಸ್ ಚಾಲಕನ ವಿರುದ್ಧ ತ್ರಿಶೂರ್ ಪೂರ್ವ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸ್ ನಿರ್ಬಂಧಗಳನ್ನು ಉಲ್ಲಂಘಿಸಿ ಪೂರಂ ಸ್ಥಳಕ್ಕೆ ತೆರಳಲು ಆಂಬ್ಯುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯ ಸಿಪಿಐ ಕೆ.ಪಿ. ಸುಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ ಪ್ರಕಾರ, ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಗೋಪಿ ಮತ್ತು ಇತರ ಆರೋಪಿಗಳು ಚುನಾವಣಾ ಪ್ರಚಾರದ ಕಾರ್ಯತಂತ್ರದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದರು. ರೋಗಿಗಳನ್ನು ಮಾತ್ರ ಕರೆದೊಯ್ಯಲು ಇರುವ ಸೇವಾ ಭಾರತಿ ಒಡೆತನದ ಆಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸಿದ್ದಾರೆ ಎಂದು ದೂರಲಾಗಿದೆ.
ಆದರೆ, ಆಂಬ್ಯುಲೆನ್ಸ್ ನಲ್ಲಿ ಉತ್ಸವದ ಸ್ಥಳಕ್ಕೆ ಆಗಮಿಸಿದ ಆರೋಪವನ್ನು ಸುರೇಶ್ ಗೋಪಿ ತಳ್ಳಿಹಾಕಿದ್ದಾರೆ.