ಬೆಂಗಳೂರು: ಕಾಂಗ್ರೆಸ್ ನ ಉಚಿತ ಆಮಿಷಗಳಿಗೆ ಬಲಿಯಾದರೆ ಮುಂದೆ ದೇವಸ್ಥಾನ, ಮಠಗಳೂ ಉಳಿಯುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಈಗ ಉಚಿತ ಬಸ್ ಇದೆ. ಕಾಂಗ್ರೆಸ್ ಸರ್ಕಾರ ಫ್ರೀ ಬಸ್ ಸೌಲಭ್ಯ ನೀಡಿದೆ ಎಂದು ಧರ್ಮಸ್ಥಳ, ಶೃಂಗೇರಿ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡ್ತಾರೆ ಎಂದು ಕಾಂಗ್ರೆಸ್ ಗೆ ಮತ ನೀಡಿದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ಸೂ ಇರಲ್ಲ. ನೋಡಲು ಧರ್ಮಸ್ಥಳ, ಶೃಂಗೇರಿ ಮಠವೂ ಇರುವುದಿಲ್ಲ. ಅದು ವಕ್ಫ್ ನದ್ದು ಎನ್ನುತ್ತಾರೆ ಎಂದು ಹೇಳಿದರು.
ವಕ್ಫ್ ಸಭೆ ನಡಾವಳಿಯಲ್ಲಿ ಸಿಎಂ ಸೂಚನೆ ಎಂದು ಹೇಳಲಾಗಿದೆ. ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದೆಯೇ? ಯಾವ ಕಾನೂನಿನಲ್ಲಿ ಬಂದಿದೆ? ವಕ್ಫ್ ಕಾಯ್ದೆ, ಕಂದಾಯ ಕಾಯ್ದೆಯಡಿ ವಕ್ಫ್ ಅದಾಲತ್ ನಡೆಸಲು ಸಾಧ್ಯವಿಲ್ಲ. ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ ಸರ್ಕಾರದ ಸಂಶೋಧನೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ವಕ್ಫ್ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ ಅದಕ್ಕೂ ಮುನ್ನ ಸಾವಿರಾರು ಎಕರೆ ಜಾಗವನ್ನು ವಕ್ಫ್ ಬೋರ್ಡ್ ಗೆ ಕೊಡಲು ಈ ಹುನ್ನಾರ ನಡೆದಿದೆ. ವಕ್ಫ್ ಅದಾಲತ್ ನಡೆಸಲು ಅವಕಾಶವಿಲ್ಲ. ಕಾನೂನಿನಲ್ಲಿಯೂ ಅವಕಾಶ ಇಲ್ಲ ಎಂದು ಹೇಳಿದರು.