ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಆಡಳಿತಾರೂಢ ಎನ್‌ಡಿಎ ಸರ್ಕಾರದ ಸೂಪರ್ ಸಿಕ್ಸ್ ಭರವಸೆಗಳ ಭಾಗವಾಗಿ ಮೂರು ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಗೆ ಶುಕ್ರವಾರ ಔಪಚಾರಿಕವಾಗಿ ಚಾಲನೆ ನೀಡಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಈದುಪುರಂನಲ್ಲಿ ಇಂದು ದೀಪಂ 2 ರ ಅಡಿಯಲ್ಲಿ ಔಪಚಾರಿಕವಾಗಿ ಪ್ರಾರಂಭಿಸಲಾದ ಯೋಜನೆಯಡಿಯಲ್ಲಿ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಉಚಿತ ಸಿಲಿಂಡರ್ ಪೂರೈಕೆ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ನೀಡಿದ್ದ ಭರವಸೆಯನ್ನು ಎನ್‌ಡಿಎ ಸರ್ಕಾರ ಈಡೇರಿಸಿದೆ. ಸ್ವಸಹಾಯ ಗುಂಪುಗಳನ್ನು (ಎಸ್‌ಎಚ್‌ಜಿ) ಮತ್ತಷ್ಟು ಬಲಪಡಿಸಲಾಗುವುದು, ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಉದ್ಯಮಿಗಳಾಗಿ ಪರಿವರ್ತಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಈಗಾಗಲೇ ಕಲ್ಯಾಣ ಪಿಂಚಣಿಗಳ ಹೆಚ್ಚಳದ ಭರವಸೆಯನ್ನು ಈಡೇರಿಸಿದೆ. ಸುಮಾರು 64 ಲಕ್ಷ ಜನರು ತಮ್ಮ ಮಾಸಿಕ ಪಿಂಚಣಿಯನ್ನು ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ತ್ವರಿತವಾಗಿ ಪಡೆಯುತ್ತಿದ್ದಾರೆ. ಪಿಂಚಣಿದಾರರು ಯಾವುದೇ ಭಯವಿಲ್ಲದೆ ಮೂರು ತಿಂಗಳಿಗೊಮ್ಮೆ ಪಿಂಚಣಿ ಪಡೆಯುವ ಆಯ್ಕೆಗಳನ್ನು ಸಹ ಪಡೆಯಬಹುದು ಎಂದು ಅವರು ಹೇಳಿದರು.
ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಈಗಾಗಲೇ ರಾಜ್ಯ ಸಚಿವಾಲಯದ ಮೊದಲ ಬ್ಲಾಕ್‌ನಲ್ಲಿರುವ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿನಿಧಿಗಳಿಗೆ ಸಬ್ಸಿಡಿ ಮೊತ್ತವನ್ನು ಹಸ್ತಾಂತರಿಸಿತ್ತು. ಯೋಜನೆಯ ಒಟ್ಟು ವೆಚ್ಚವನ್ನು ವಾರ್ಷಿಕ 2,684 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ.
876 ರೂ. ಮೊತ್ತವನ್ನು ಸಿಲಿಂಡರ್ ಖರೀದಿಸಿದ ನಂತರ ಕೇವಲ 48 ಗಂಟೆಗಳಲ್ಲಿ ಎಲ್ಲಾ ಫಲಾನುಭವಿಗಳ ವೈಯಕ್ತಿಕ ಖಾತೆಗೆ ಜಮಾ ಮಾಡಲಾಗುತ್ತದೆ.