ಅಮೃತಸರ: 9 ಎಕರೆ ಪ್ರದೇಶದಲ್ಲಿ ಭವ್ಯ ಬಂಗಲೆ ಮತ್ತು ನಿಗದಿತ ಕಾಲಮಿತಿಯೊಳಗೆ ಅದ್ಭುತ ಎಸ್ಟೇಟ್ ಮಾದರಿಯನ್ನು ವಿನ್ಯಾಸಗೊಳಿಸಿ ನಿರ್ಮಿಸಿಕೊಟ್ಟಿದ್ದಕ್ಕೆ ಉದ್ಯಮಿಯೊಬ್ಬರು ಖುಷಿಯಾಗಿದ್ದು, ಕಟ್ಟಡ ನಿರ್ಮಾಣ ಗುತ್ತಿಗೆದಾರನಿಗೆ ಒಂದು ಕೋಟಿ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಪಂಜಾಬಿನ ಮೊಹಾಲಿ ಜಿಲ್ಲೆಯ ಝಿರಕ್ ಪುರದಲ್ಲಿ ಅತ್ಯಂತ ಸುಂದರವಾದ ಎಸ್ಟೇಟ್ ಅಭಿವೃದ್ಧಿಪಡಿಸಿದ ಗುತ್ತಿಗೆದಾರ ರಾಜೀಂದರ್ ಸಿಂಗ್ ರೂಪ್ರಾ ಅವರಿಗೆ ಉದ್ಯಮಿ ಗುರುದೀಪ್ ದೇವ್ ಬಾತ್ ಅವರು 18 ಕ್ಯಾರೆಟ್ ಚಿನ್ನದ ಹರಳುಗಳಿಂದ ರಚಿಸಲಾದ ದುಬಾರಿ ಬೆಲೆಯ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಪಂಜಾಬ್ ನ ಶಹಾಕೋಟ್ ನಿವಾಸಿಯಾಗಿರುವ ಕಟ್ಟಡ ನಿರ್ಮಾಣ ಗುತ್ತಿಗೆದಾರ ರಾಜೀಂದರ್ ಸಿಂಗ್ ಅವರು ರಾಜಸ್ಥಾನದ ಅರಮನೆಗಳಿಂದ ಪ್ರಭಾವಿತರಾಗಿ ಎರಡು ವರ್ಷ ಕಾಲ 200 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು 9 ಎಕರೆಯಲ್ಲಿ ಎಸ್ಟೇಟ್ ಅಭಿವೃದ್ಧಿಪಡಿಸಿದ್ದಾರೆ. ಇದೊಂದು ಖಾಸಗಿ ಕೋಟೆಯ ರೀತಿ ಇದೆ. ಭವ್ಯವಾದ ಬಂಗಲೆ, ವಿಸ್ತಾರವಾದ ಸಭಾಂಗಣ, ನಯನ ಮನೋಹರ ಉದ್ಯಾನ ಸೇರಿದಂತೆ ಸಕಲ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ನನ್ನ ಕನಸಿನ ಅರಮನೆಯನನ್ಉ ಅಚ್ಚುಕಟ್ಟಾಗಿ ನಿರ್ಮಿಸಿದ ಗುತ್ತಿಗೆದಾರರು ತಂಡದ ಕೆಲಸ ಮತ್ತು ಬದ್ಧತೆ ನನಗೆ ಹೆಚ್ಚಿನ ಖುಷಿ ಕೊಟ್ಟಿದೆ. ಹೀಗಾಗಿ ಅವರಿಗೆ ರೋಲೆಕ್ಸ್ ವಾಚ್ ಗಿಫ್ಟ್ ನೀಡಿರುವುದಾಗಿ ಗುರುದೀಪ್ ದೇವ್ ಬಾತ್ ತಿಳಿಸಿದ್ದಾರೆ.