ಬೆಂಗಳೂರು ಮೂಲದ ಭಾರತೀಯ ಟೆಕ್ಕಿ ಪ್ರಭಾ ಅರುಣ್‌ಕುಮಾರ್ ಹತ್ಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದವರಿಗೆ ಆಸ್ಟ್ರೇಲಿಯಾ ಪೊಲೀಸರು 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದಾರೆ.
ಬೆಂಗಳೂರಿನವರಾದ ಪ್ರಭಾ ಅವರನ್ನು ಮಾರ್ಚ್ 7, 2015 ರಂದು ನ್ಯೂ ಸೌತ್ ವೇಲ್ಸ್ ಪಾರ್ಕ್‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಘಟನೆ ನಡೆದು ಸುಮಾರು ಒಂದು ದಶಕ ಕಳೆದಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಪೊಲೀಸರು ಇನ್ನೂ ಆರೋಪಿಯನ್ನು ಗುರುತಿಸಿಲ್ಲ. ತನಿಖೆಯು ಸ್ಥಗಿತಗೊಂಡಿರುವುದರಿಂದ ಆಸ್ಟ್ರೇಲಿಯಾ ಅಧಿಕಾರಿಗಳು ಹಂತಕನ ಪತ್ತೆಗೆ ಬಹುಮಾನ ನೀಡಲು ಮುಂದಾಗಿದ್ದಾರೆ.
ಪ್ರಭಾ, ಆಸ್ಟ್ರೇಲಿಯಾದಲ್ಲಿ ಐಟಿ ಕಂಪನಿ ಮೈಂಡ್ ಟ್ರೀ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಕೊಲೆಯಾದ ರಾತ್ರಿ, ತನ್ನ ಪತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಬೆಂಗಳೂರು ಮೂಲದ ಐಟಿ ಕನ್ಸಲ್ಟೆನ್ಸಿಯ ಹಿರಿಯ ತಾಂತ್ರಿಕ ವಿಶ್ಲೇಷಕರಾದ ಪ್ರಭಾ ಅವರು 2012 ರಿಂದ ಕ್ಲೈಂಟ್ ಪ್ರಾಜೆಕ್ಟ್‌ಗಾಗಿ ಆನ್‌ಸೈಟ್‌ನಲ್ಲಿದ್ದರು ಮತ್ತು ಹತ್ಯೆಗೀಡಾದ ಸಂದರ್ಭದಲ್ಲಿ ಮುಂದಿನ ತಿಂಗಳು ಭಾರತಕ್ಕೆ ಮರಳಬೇಕಿತ್ತು. ಕೊಲೆಯಾದ ಸಂದರ್ಭದಲ್ಲಿ ಆಕೆ ಸಿಡ್ನಿಯ ವೆಸ್ಟ್‌ಮೀಡ್‌ನಲ್ಲಿ ಸಹೋದ್ಯೋಗಿಯೊಂದಿಗೆ ತಂಗಿದ್ದರು.