ಬೆಂಗಳೂರು: ತಲತಲಾಂತರಗಳಿಂದ ಬಂದಿರುವ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ರೈತರ ಜಮೀನು ವಕ್ಫ್ ಪಾಲಾಗಿದೆ. ರೈತರು ಬೀದಿಗೆ ಬಂದರೆ ಏನು ಮಾಡಬೇಕು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ. ರೈತರ ಕೃಷಿ ಭೂಮಿಯನ್ನು ವಕ್ಫ್ ಬೋರ್ಡ್ ಗೆ ವರ್ಗಾಯಿಸಿದೆ. ಈ ಬಗ್ಗೆ ಬಿಜೆಪಿ ಹೋರಾಟ ನಡೆಸಲಿದೆ. ರೈತರ ಪರ ನಾವು ನಿಂತಿದ್ದೇವೆ. ಅವರೊಂದಿಗೆ ಧ್ವನಿಗೂಡಿಸುತ್ತೇವೆ ಎಂದರು.
ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಹಿಂದಿನಿಂದಲೂ ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ವಿಭಜನೆ ಕೆಲಸ ಮಾಡುತ್ತಿದೆ. ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಇಂದು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದ ಪ್ರತಿ ತಾಲೂಕುಗಳಿಗೂ ಬಿಜೆಪಿ ತಂಡ ಭೇಟಿ ಕೊಡಲಿದೆ. ರೈತರ ಸಮಸ್ಯೆ, ಸಂಕಷ್ಟ ಆಲಿಸಲಿದೆ. ರೈತರಿಗೆ ಕಾನೂನು ಸಹಾಯದಿಂದ ಹಿಡಿದು ಯಾವುದೇ ಸಹಾಯವನ್ನು ಬೇಕಾದರೂ ಬಿಜೆಪಿ ಕೊಡಲಿದೆ. ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಬಿಜೆಪಿ ಮಾಡಲಿದೆ. ರೈತರೊಂದಿಗೆ ಗಟ್ಟಿಯಾಗಿ ಬಿಜೆಪಿ ನಿಲ್ಲಲಿದೆ ಎಂದು ಹೇಳಿದರು.