ಬೆಂಗಳೂರು: ವಿವಿಧ ನೇಮಕಾತಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವತಿಯಿಂದ ನಡೆಸಲಾಗುವ ಎಲ್ಲಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ನು ಮುಂದೆ ಮೊಬೈಲ್ ನಂಬರ್ ಇರುವ ಆಧಾರ್ ಕಾರ್ಡ್ ಲಗತ್ತಿಸುವುದು ಕಡ್ಡಾಯವಾಗಿದೆ.
ಪರೀಕ್ಷಾ ಕ್ರಮ ತಡೆಯಲು ಕೃತಕ ಬುದ್ಧಿಮತ್ತೆ ಅಳವಡಿಕೆ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಮೊದಲಾದ ಸುಧಾರಣಾ ಕ್ರಮ ಕೈಗೊಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯ ಮಾಡಲು ಅನುಮತಿ ಕೋರಿ ಇ- ಆಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ಹೆಚ್ಚಿನ ಅಭ್ಯರ್ಥಿಗಳು ಸೈಬರ್ ಕೆಫೆಗಳಿಗೆ ತೆರಳಿ ನೇಮಕಾತಿ ಪರೀಕ್ಷೆ ಅಥವಾ ಸಿಇಟಿಗೆ ಸಲ್ಲಿಸುತ್ತಾರೆ. ಅರ್ಜಿ ಭರ್ತಿ ಮಾಡುವವರು ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸುತ್ತಾರೆ. ಈ ಸಂಖ್ಯೆಗಳು ಸೈಬರ್ ಕೆಫೆ ಮಾಲೀಕರು ಅಥವಾ ಮಧ್ಯವರ್ತಿಗಳಿಗೆ ಸೇರಿರುತ್ತವೆ. ಒಟಿಪಿ ಪಡೆಯುವವರು ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಲು ಆಧಾರ್ ಬಳಕೆ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.