ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಡೆಂಘೀ ಜ್ವರವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ.
ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ವಿಫಲರಾದವರ ಮೇಲೆ ದಂಡಾಸ್ತ್ರ ಪ್ರಯೋಗಿಸಲಾಗುವುದು. ಕಟ್ಟಡ ಅಥವಾ ಜಮೀನಿನ ಮಾಲೀಕರು, ಬಾಡಿಗೆದಾರರು ವಾಸ ಸ್ಥಳಗಳಲ್ಲಿ ಸೊಳ್ಳೆ ಸಂತಾನೋತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕಟ್ಟಡ ಜಮೀನಿನ ಬಳಿ ನೀರು ಶೇಖರಣೆ, ಅನುಪಯುಕ್ತ ಟ್ಯಾಂಕ್ ಗಳು ಇಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಲಾಗಿದೆ.
ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ನೀರಿನ ಶೇಖರಣ ಪಾತ್ರೆಗಳು, ಸಂಪ್, ಓವರ್ ಹೆಡ್ ಟ್ಯಾಂಕ್ ಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು. ಡೆಂಘೀ ನಿಯಂತ್ರಣ ಕ್ರಮ ಜಾರಿಗೆ ತರುವುದು, ಕಾಲಕಾಲಕ್ಕೆ ಪರಿಶೀಲನೆ ಜೊತೆಗೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ಅಧಿಕಾರ ವ್ಯಾಪ್ತಿಗೆ ಮಾತ್ರ ಸಕ್ಷಮ ಪ್ರಾಧಿಕಾರ ರಚಿಸಲಾಗುವುದು.
ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ದಂಡ ಪ್ರಯೋಗಿಸಲಾಗುವುದು. ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ನಗರದ ಕುಟುಂಬಗಳಿಗೆ 800 ರೂ., ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ 400 ರೂ. ದಂಡ ವಿಧಿಸಲಾಗುತ್ತದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ, ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ ಕ್ರಮವಾಗಿ 2000 ರೂ., 1500 ರೂ. ದಂಡ ವಿಧಿಸಲಾಗುವುದು. ಪ್ರಗತಿಯಲ್ಲಿರುವ ಅಥವಾ ನಿರ್ಮಾಣ ಸ್ಥಳಗಳು, ಖಾಲಿ ಜಾಗಗಳಿಗೆ 4000 ರೂ., 2000 ರೂ. ದಂಡ ವಿಧಿಸಲಾಗುವುದು. ಸೂಚನೆ ನಂತರವೂ ನಿಯಮ ಪಾಲಿಸದಿದ್ದರೆ ಹೆಚ್ಚುವರಿಯಾಗಿ ಶೇಕಡ 50ರಷ್ಟು ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.