ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿಯ ಬುಡಕಟ್ಟು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಖಲ್ತಾ ಗ್ರಾಮದ ಆದಿವಾಸಿಗಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಕಲ್ಪೇಶ್ ಬರಿಯಾ ಎಂದು ಗುರುತಿಸಲಾಗಿದೆ ಎಂದು ಧನಪುರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಬರಿಯಾ ಗುರುವಾರ ಸಂಜೆ 17 ವರ್ಷದ ವಿದ್ಯಾರ್ಥಿನಿಯನ್ನು ಅಡುಗೆ ಮಾಡುವ ನೆಪದಲ್ಲಿ ಖಾಲ್ತಾ ಆಶ್ರಮಶಾಲಾ ಕ್ಯಾಂಪಸ್ ನಲ್ಲಿರುವ ತನ್ನ ಕ್ವಾರ್ಟರ್ಸ್‌ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ. ಅವನು ಅವಳನ್ನು ಹಿಂಬದಿಯಿಂದ ಹಿಡಿದುಕೊಂಡು ಕಿರುಕುಳ ನೀಡಿದ್ದು, ಅವಳು ಸ್ಥಳದಿಂದ ಹೊರಟು ಹೋಗಿದ್ದಾಳೆ.
ಅದೇ ಶಾಲೆಯಲ್ಲಿ ಓದುತ್ತಿರುವ ಆಕೆಯ ತಂಗಿಯರಿಗೆ ತಿಳಿಸಿದ್ದು, ಅವರು ತಮ್ಮ ತಂದೆಗೆ ಮಾಹಿತಿ ನೀಡಿದ್ದಾರೆ. ಕುಟುಂಬವು ಬರಿಯಾ ವಿರುದ್ಧ ಶುಕ್ರವಾರ ದೂರು ದಾಖಲಿಸಿದೆ ಮತ್ತು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಬರಿಯಾ ವಿರುದ್ಧ ಪೋಕ್ಸೊ ಕಾಯ್ದೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಸೇರಿ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಶ್ರಮಶಾಲೆಯನ್ನು ರಾಜ್ಯ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿದೆ.