alex Certify ಜಾತಿ ವ್ಯವಸ್ಥೆ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಲು ಸಿಎಂ ಸಿದ್ಧರಾಮಯ್ಯ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಿ ವ್ಯವಸ್ಥೆ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಲು ಸಿಎಂ ಸಿದ್ಧರಾಮಯ್ಯ ಕರೆ

ಬೆಳಗಾವಿ(ಚನ್ನಮ್ಮನ ಕಿತ್ತೂರು): ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತಾಗ ಮಾತ್ರ ಜಾತಿ ವ್ಯವಸ್ಥೆ ವಿನಾಶಗೊಳಿಸುವುದು ಸಾಧ್ಯ. ಜಾತಿ ವ್ಯವಸ್ಥೆ ವಿರುದ್ಧ 12 ನೇ ಶತಮಾನದಲ್ಲಿಯೇ ಕ್ರಾಂತಿ ಆರಂಭಿಸಿದ್ದರೂ ಇದುವರೆಗೆ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಸರ್ಕಾರ ಸಾಮಾಜಿಕ ಸಮಾನತೆಯ ತತ್ವದ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಹೇಳಿದರು.

ಬೆಳಗಾವಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200 ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಲಿಷ್ಠ ಬ್ರಿಟೀಷರ ವಿರುದ್ಧ ಹೋರಾಟದ‌ ಕಹಳೆ ಮೊಳಗಿಸಿದ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ರಾಯಣ್ಣ ಮತ್ತು ಬಾಳಪ್ಪನವರು ಚನ್ನಮ್ಮನ ಹೋರಾಟದಲ್ಲಿ ಜತೆಗಿದ್ದವರು. ದೇಶಪ್ರೇಮ ಬೆಳೆಸಲು ಇವರ ಹೋರಾಟ ಸ್ಫೂರ್ತಿಯಾಗಿದೆ. ಜಾತಿಧರ್ಮ ಬದಿಗಿಟ್ಟು ಪ್ರತಿಯೊಬ್ಬರು ಪರಸ್ಪರ ಪ್ರೀತಿಸುವ ಮೂಲಕ ದೇಶಪ್ರೇಮವನ್ನು ಪ್ರದರ್ಶಿಸಬೇಕು ಎಂದರು.

ಚನ್ನಮ್ಮನವರನ್ನು ವೈಭವೀಕರಿಸಲು ಜಯಂತ್ಯೋತ್ಸವ ಮಾಡುತ್ತಿಲ್ಲ; ಚನ್ನಮ್ಮನ ಐತಿಹಾಸಿಕ ಹೋರಾಟ ಜನರಿಗೆ ತಿಳಿಸಲು ಆಚರಿಸಲಾಗುತ್ತಿದೆ. ಅದೇ ರೀತಿ ಕಿತ್ತೂರು ವಿಜಯೋತ್ಸವದ 200 ನೇ ವರ್ಷಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ ಎಂದರು.

ಹುಟ್ಟುವಾಗ ವಿಶ್ವಮಾನವ ಬೆಳಿತಾ‌ ಬೆಳಿತಾ ಅಲ್ಪಮಾನವರಾಗುತ್ತಾರೆ. ನಾವು ಬೆಳಿತಾ ಬೆಳಿತಾ ವಿಶ್ವಮಾನವರಾಗಬೇಕಿದೆ ಎಂದು ಕುವೆಂಪು ಹೇಳಿದ್ದಾರೆ. ಅದೇ ರೀತಿ ನಾವು ವಿಶ್ವಮಾನವರಾಗಬೇಕಿದೆ. ಅನೇಕರ ತ್ಯಾಗ ಬಲಿದಾನಗಳಿಂದ ನಾವು ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಮ ಸಮಾಜ ನಿರ್ಮಿಸಬೇಕಿದೆ. ಬಸವಣ್ಣನವರ ಆಶಯದಂತೆ ಜಾತಿ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ, ಕಿತ್ತೂರು ವಸತಿ ಶಾಲೆಗೆ‌ ಇಲಾಖೆಯ ವತಿಯಿಂದ  22 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಯಾವುದೇ ಜಾತಿಭೇದವಿಲ್ಲದೇ ಸರ್ವರಿಗೂ ಗ್ಯಾರಂಟಿಯ ಸೌಲಭ್ಯವನ್ನು ತಲುಪಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಸೂರ್ಯ ಮುಳದದ ಸಾಮ್ರಾಜ್ಯ ಎಂದೇ ಹೆಸರು ಗಳಿಸಿದ್ದ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಸ್ವಾಭಿಮಾನದ ಕಹಳೆ‌ ಮೊಳಗಿಸಿದ್ದ ಚನ್ನಮ್ಮ ದೇಶಕ್ಕಾಗಿ ಮಾಡಿದ ಹೋರಾಟವು ಐತಿಹಾಸಿಕ ಮಹತ್ವ ಹೊಙದಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ಸ್ವಾತಂತ್ರ್ಯ‌ ಹೋರಾಟದಲ್ಲಿ ಜನಸಾಮಾನ್ಯರು ಪಾಲ್ಗೊಂಡಿದ್ದಾರೆ. ಆದರೆ ಸ್ವಾತಂತ್ರ್ಯ‌ ಹೋರಾಟದ ಚರಿತ್ರೆ ಬರೆಯುವಾಗ ಇಂತಹ ಸಾಮಾನ್ಯ‌ ಜನರು ಮತ್ತು ಮಹಿಳೆಯರನ್ನು ಒಳಗೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಿತ್ತೂರು ಉತ್ಸವ; ಕಿತ್ತೂರು ಕರ್ನಾಟಕದ ನಾಡಹಬ್ಬವಾಗಲಿ- ಸ್ವಾಮೀಜಿ ಒತ್ತಾಯ:

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಕಿತ್ತೂರು ಉತ್ಸವವನ್ನು ದಸರಾ ಮಾದರಿಯಲ್ಲಿ ಕಿತ್ತೂರು ಕರ್ನಾಟಕದ ನಾಡಹಬ್ಬವಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಚನ್ನಮ್ಮನ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದು, ಸಂತಸಕರವಾಗಿದೆ. ಅಪಶಕುನಗಳ ಕುತ್ಸಿತ ಕಟ್ಟುಕಥೆಗಳ ಮಧ್ಯೆಯೂ ಆಗಮಿಸುವ ಮೂಲಕ ಸಿದ್ಧರಾಮಯ್ಯನವರು ಚನ್ನಮ್ಮನವರಲ್ಲಿದ್ದ ಧೈರ್ಯ, ಸಾಹಸವನ್ನು ಪ್ರದರ್ಶಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಸಂಗೊಳ್ಳಿ ಮತ್ತು ನಂದಗಡದ ಮಾದರಿಯಲ್ಲಿ ಚನ್ನಮ್ಮನ ಕಿತ್ತೂರು ಅಭಿವೃದ್ಧಿಪಡಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಝಾನ್ಸಿ ರಾಣಿ ಕ್ಷೇತ್ರ ರಾಷ್ಟ್ರೀಯ ಸ್ಮಾರಕವಾಗಿದೆ‌ ಅದೇ ರೀತಿ ಚನ್ನಮ್ಮನ ಸಮಾಧಿ ಸ್ಥಳವಿರುವ ಬೈಲಹೊಂಗಲನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕ್ರಮ ವಹಿಸಬೇಕು. ಚನ್ನಮ್ಮ ಮತ್ತು ರಾಯಣ್ಣನ ಖಡ್ಗವನ್ನು ಭಾರತಕ್ಕೆ ತರಲು ಸರ್ಕಾರವು ಪ್ರಯತ್ನಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಚನ್ನಮ್ಮನ ಕಿತ್ತೂರಿನ ರಾಜಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಿಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗೀಶ್ವರರು ಸಾನಿಧ್ಯ ವಹಿಸಿದ್ದರು.

ಕರ್ನಾಟಕ ವಿಧಾನಸಭೆಯ‌ ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ‌ ಪಟ್ಟಣ, ಕರ್ನಾಟಕ ರಾಜ್ಯ‌ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ವಿಶ್ವಾಸ್ ವೈದ್ಯ, ಆಸಿಫ್(ರಾಜು) ಸೇಠ್, ಗಣೇಶ ಹುಕ್ಕೇರಿ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ‌ ಗುಳೇದ ಮತ್ತಿತರರು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...