ಬೆಳಗಾವಿ: ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ರಕ್ಷಿಸಿದ ಅಥಣಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂವರ ಪೈಕಿ ಓರ್ವನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಅಪಹರಣದ ಆರೋಪಿ ಸಾಂಬಾ ರಾವಸಾಬ್ ಕಾಂಬಳೆ(25) ಕಾಲಿಗೆ ಗುಂಡು ಹಾರಿಸಲಾಗಿದೆ. ಬಂಧನದ ವೇಳೆ ಪಿಎಸ್ಐ ಮತ್ತು ಸಿಬ್ಬಂದಿ ಮೇಲೆ ಆರೋಪಿ ಸಾಂಬಾ ರಾವ್ ಕಲ್ಲು ತೂರಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ.
ಪಿಎಸ್ಐ ಮತ್ತು ಓರ್ವ ಕಾನ್ಸ್ಟೇಬಲ್ ಕೈಗೆ ಗಾಯಗಳಾಗಿವೆ. ಆತ್ಮ ರಕ್ಷಣೆಗಾಗಿ ಸಾಂಬಾ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಗಾಯಾಳು ಪೊಲೀಸರು ಮತ್ತು ಆರೋಪಿಯನ್ನು ಅಥಣಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಸಾಂಬಾ ಕಾಂಬಳೆ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ರವಿಕಿರಣ್ ಕಮಲಾಕರ್, ಬಿಹಾರ ಮೂಲದ ಶಾರುಖ್ ಶೇಕ್ ಬಂಧಿತ ಆರೋಪಿಗಳು.
4 ವರ್ಷದ ಸ್ವಸ್ತಿ ದೇಸಾಯಿ, 3 ವರ್ಷ ವ್ಯೋಮ ದೇಸಾಯಿ ಅವರನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ಆರೋಪಿಗಳ ಬಳಿ ಮಕ್ಕಳ ತಂದೆ ವಿಜಯ ದೇಸಾಯಿ ಹಣ ಪಡೆದಿದ್ದ. ಹಣ ಡಬಲ್ ಮಾಡಿಕೊಡುವುದಾಗಿ ಕೋಟ್ಯಂತರ ರೂಪಾಯಿ ಪಡೆದುಕೊಂಡಿದ್ದ. ಹಲವು ದಿನಗಳಿಂದ ಆರೋಪಿಗಳು ವಾಪಸ್ ಕೊಡುವಂತೆ ಕೇಳುತ್ತಿದ್ದರು. ಹಣ ವಾಪಸ್ ಕೊಡದಿದ್ದಕ್ಕೆ ನಿನ್ನೆ ಮಧ್ಯಾಹ್ನ ಮನೆಗೆ ನುಗ್ಗಿ ಮಕ್ಕಳನ್ನು ಅಪಹರಿಸಿದ್ದರು. ಹಣ ಕೊಟ್ಟು ಮಕ್ಕಳನ್ನು ಬಿಡಿಸಿಕೊಳ್ಳುವಂತೆ ಆರೋಪಿಗಳು ಹೇಳಿದ್ದರು. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.