ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಜಯಗಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಇದಕ್ಕೂ ಮುನ್ನ ಯೋಗೀಶ್ವರ್ ಪರ ರೋಡ್ ಶೋ ನಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆರೆಗಳಿಗೆ ಜೀವದಾನ ಮಾಡಿದ ಯೋಗೀಶ್ವರ್ ಅಭಿವೃದ್ಧಿ ಪರವಾಗಿ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು ಕಾಂಗ್ರೆಸ್ಸಿಗೆ ಮರಳಿದ್ದಾರೆ. ಇವರನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಯೋಗೀಶ್ವರ್ ಗೆಲ್ಲುವ ಮೂಲಕ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿಗೆ ಮರು ಚಾಲನೆ ನೀಡಿ ಎಂದು ಕರೆ ನೀಡಿದರು.
ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಬಿಜೆಪಿ ಒಕ್ಕೂಟದಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಶ್ರೀಮತಿ ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಯೋಗೀಶ್ವರ್ ಅವರೇ ಭರ್ಜರಿ ಜಯಗಳಿಸೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮದು ಜನಕಲ್ಯಾಣದ ಸರ್ಕಾರ. ಈ ಸರ್ಕಾರದಲ್ಲಿ ಯೋಗೀಶ್ವರ್ ಅವರು ಇರಬೇಕು. ಹೆಚ್.ಡಿ.ಕುಮಾರಸ್ವಾಮಿಯವರು ಶಾಸಕರಾಗಿ, ಮುಖ್ಯಮಂತ್ರಿ ಆಗಿದ್ದಾಗಲೂ ಮಾಡದ ಚನ್ನಪಟ್ಟಣದ ಅಭಿವೃದ್ಧಿ ಕೆಲಸಗಳು ಮುಂದಿನ ತಿಂಗಳಿನಿಂದ ಶಾಸಕರಾಗಿ ಯೋಗೀಶ್ವರ್ ಅವರು ಮುಂದುವರೆಸುತ್ತಾರೆ ಎಂದರು.