ಬೆಂಗಳೂರು: ಮಳೆ ನೀರು ನುಗ್ಗಿ ತೊಂದರೆಗೊಳಗಾದ ಮನೆ ಮಾಲೀಕರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಬುಧವಾರ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್, ಬ್ಯಾಟರಾಯನಪುರದ ಮರಿಯಣ್ಣ ಪಾಳ್ಯ, ಕೆಆರ್ ಪುರದ ಶ್ರೀ ಸಾಯಿ ಲೇಔಟ್ ಗೆ ಭೇಟಿ ನೀಡಿ ಪರಿಹಾರ ಕಾರ್ಯ ವೀಕ್ಷಿಸಿ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ
ಇದೇ ಸಂದರ್ಭದಲ್ಲಿ ಮಾತನಾಡಿ, ಮಳೆ ನೀರು ನುಗ್ಗಿ ತೊಂದರೆಗೊಳಗಾದ ಮನೆ ಮಾಲೀಕರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ವಸತಿ ಇಲ್ಲದವರಿಗೆ ವಾಸಿಸಲು ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು. ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.