ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವರುಣಾರ್ಭಟ ಆರಂಭವಾಗಿದ್ದು, ಗುಡುಗು ಸಹಿತ ಭಾರಿ ಮಳೆಗೆ ಅವಾಂತರಗಳ ಸರಮಾಲೆ ಮುಂದುವರೆದಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ಆಗಾಗ ಬಿಸಿಲು, ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಕಾರ್ಮೋಡದ ಛಾಯೆ ಆವರಿಸಿದ್ದು, ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಮಳೆರಾಯ ಅಬ್ಬರಿಸಲು ಆರಂಭಿಸಿದ್ದಾನೆ. ಮಳೆಯಿಂದಾಗಿ ಮತ್ತದೇ ಅಧ್ವಾನ ಶುರುವಾಗಿದ್ದು, ನೋಡ ನೋಡುತ್ತಿದ್ದಂತೆ ರಸ್ತೆಗಳು ಜಲಾವೃತಗೊಂಡಿವೆ. ಚರಂಡಿ, ಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ವಿಧಾನಸೌಧ, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಮೈಸೂರು ರಸ್ತೆ, ಶಾಂತಿನಗರ, ವಿಲ್ಸನ್ ಗಾರ್ಡನ್, ಕಾರ್ಪೊರೇಷನ್, ರಿಚ್ ಮಂಡ್ ಟೌನ್ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ರಸ್ತೆಗಳು ನದಿಯಂತೆ ತುಂಬಿ ಹರಿಯುತ್ತಿದ್ದು, ಹಲವೆಡೆ ಮರಗಳು ಮುರಿದು ಬಿದ್ದು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಇನ್ನು ಹಲವೆಡೆ ಅಪಾರ್ಟ್ ಮೆಂಟ್, ಮನೆಗಳ ಬೇಸ್ ಮೆಂಟ್ ಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಕಂಗೆಟ್ಟು ಹೋಗಿದ್ದಾರೆ.