ಬೆಂಗಳೂರು: ಚನ್ನಪಟ್ಟಣ ಉಪಚುನಾವಣಾ ಅಖಾಡ ರಣರೋಚಕ ಘಟ್ಟ ತಲುಪಿದೆ. ಎನ್ ಡಿಎ ಟಿಕೆಟ್ ಸಿಗದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕೃತವಾಗಿ ಮರುಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣ ಕ್ಷೇತ್ರದಿಂದ ಯೋಗೇಶ್ವರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾಳೆ ಬೆಳಿಗ್ಗೆ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದು ಸಂಜೆ ಎಐಸಿಸಿಯಿಂದ ಉಪಚುನಾವಣಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಘೋಷಣೆಯಾಗಲಿದೆ ಎಂದರು.
ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ನಾವು ಎಐಸಿಸಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿ ಲಿಸ್ಟ್ ಕಳಿಸುತ್ತೇವೆ. ಎಐಸಿಸಿ ನಾಯಕರು ಅಭ್ಯರ್ಥಿ ಆಯ್ಕೆ ಮಾಡಿ ಇಂದು ಸಂಜೆ ಘೋಷಿಸಲಿದ್ದಾರೆ. ನೋಡೋಣ ಅವರು ಯಾವ ಹೆಸರನ್ನು ಪ್ರಕಟಿಸಲಿದ್ದಾರೆ ಎಂಬುದನ್ನು ಕಾದುನೋಡೋಣ ಎಂದಷ್ಟೇ ತಿಳಿಸಿದ್ದಾರೆ.
ನಾಳೆ ಶುಭ ಮುಹೂರ್ತದಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ಮಾಡಲಿದೆ. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.