ಗದಗ: ಅಕ್ಟೋಬರ್ 19ರಂದು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣ ಬಂದ್ ಗೆ ಶ್ರೀರಾಮಸೇನೆ, ಗೋಸಾವಿ ಸಮಾಜ ಕರೆ ನೀಡಿದೆ.
ವಿಜಯದಶಮಿ ದಿನ ಲಕ್ಷ್ಮೀಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದ ವತಿಯಿಂದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಭಾನು ಮಾರ್ಕೆಟ್ ನಲ್ಲಿ ಅನ್ಯಕೋಮಿನ ಯುವಕರ ಗುಂಪು ಮೆರವಣಿಗೆಗೆ ನುಗ್ಗಿ ಗೋಸಾವಿ ಯುವಕರ ಮೇಲೆ ಹಲ್ಲೆ ನಡೆಸಿ, ಕೇಸರಿ ಶಾಲು ನೆಲಕ್ಕೆ ಎಸೆದು ತುಳಿದಿದ್ದರು. ಈ ಬಗ್ಗೆ ಗೋಸಾವಿ ಸಮಾಜದ ಮುಖಂಡರು ಲಕ್ಷ್ಮೀಶ್ವರ ಠಾಣೆಗೆ ದೂರು ನೀಡಲು ಹೋಗಿದ್ದರು. ಆದರೆ ಈ ವೇಳೆ ಠಾಣೆ ಪಿಎಸ್ ಐ ಈರಣ್ಣ ರಿತ್ತಿ ದೂರುದಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ದೂರು ನೀಡಲು ಹೋದವರ ಮೇಲೆಯೇ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಹಾಗೂ ಗೋಸಾವಿ ಸಮಾಜದ ಯುಕರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅ.19ರಂದು ಲಕ್ಷ್ಮೀಶ್ವರ ಬಂದ್ ಗೆ ಕರೆ ನೀಡಲಾಗಿದೆ.
ಶ್ರೀರಾಮಸೇನೆ, ಗೋಸಾವಿ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಲಕ್ಷ್ಮೀಶ್ವರ ಬಂದ್ ಗೆ ಕರೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗೋಸಾವಿ ಸಮಾಜ ಮುಖಂಡರು ತಿಳಿಸಿದ್ದಾರೆ.