
ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು 2014ರಲ್ಲಿ ನಾನೇ ಶಂಕುಸ್ಥಾಪನೆ ಮಾಡಿದ್ದೆ, ಇದೀಗ ನನ್ನಿಂದಲೇ ಉದ್ಘಾಟನೆಯಾಗಿದೆ. ನಾನು ನುಡಿದಂತೆ ನಡೆದಿದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿಯ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ಸರ್ಕಾರಗಳು ಅಗತ್ಯ ಹಣ ಬಿಡುಗಡೆ ಮಾಡದೆ ನಿರಾಸಕ್ತಿ ವಹಿದಿದ್ದರಿಂದ ಯೋಜನೆ ನಿಧಾನವಾಯಿತು. ಮತ್ತೆ ನಾವು ಅಧಿಕಾರಕ್ಕೆ ಬಂದು ಯೋಜನೆ ಲೋಕಾರ್ಪಣೆಗೊಳಿಸಿ 110 ಹಳ್ಳಿಗಳಿಗೆ ನೀರನ್ನು ಒದಗಿಸಿದ್ದೇವೆ. ಆರನೇ ಹಂತದ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದು ನುಡಿದಂತೆ ನಡೆದು ಜನರ ಕೆಲಸ ಮಾಡಿ ತೋರಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ತೆರಿಗೆಯಲ್ಲಿ ನಮಗೆ ಅನ್ಯಾಯ ಆಗಿದೆ. ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ತೆರಿಗೆ ಪಾಲಿನಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶಕ್ಕೆ ಬಹುಪಾಲು ಹೋಗಿ ರಾಜ್ಯಕ್ಕೆ ಅನ್ಯಾಯ ಮಾಡಿ ಮಲತಾಯಿ ಧೋರಣೆ ತೋರಿದೆ ಎಂದು ದೂರಿದ್ದಾರೆ.
ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಳುತ್ತಲೇ ಇದ್ದೇವೆ. ಮಹದಾಯಿಗೂ ಅನುಮತಿ ಕೇಳಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಡದೆ ಅನ್ಯಾಯ ಮಾಡುತ್ತಿದೆ. ಹೆಚ್.ಡಿ. ಕುಮಾರಸ್ವಾಮಿ ಅವರು ಯಾಕೆ ಅನುಮತಿ ಕೊಡಿಸುತ್ತಿಲ್ಲ? ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿಯ ಸಂಸದರು ಏಕೆ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ಏಕೆ ಮಲತಾಯಿ ಧೋರಣೆ ಎಂದು ಕೇಂದ್ರ ಸರ್ಕಾರವನ್ನು ಇವರು ಯಾರೂ ಪ್ರಶ್ನಿಸುತ್ತಿಲ್ಲ ಎಂದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಸವಲತ್ತು ಒದಗಿಸುವ ಸವಾಲನ್ನು ನಮ್ಮ ಸರ್ಕಾರ ಸ್ವೀಕರಿಸಿ, ಯಶಸ್ವಿಯಾಗಿ ನಿಭಾಯಿಸುತ್ತೇವೆ. ಕಾವೇರಿ ಕುಡಿಯುವ ನೀರಿನ ಆರನೇ ಹಂತದ ಯೋಜನೆಯಿಂದ 500 ಎಂಎಲ್‌ಡಿ ಕುಡಿಯುವ ನೀರು ಬೆಂಗಳೂರಿಗರಿಗೆ ಸಿಗುತ್ತದೆ. ಇದನ್ನೂ ಘೋಷಿಸಿದ್ದೀವಿ, ಜಾರಿ ಮಾಡಿ ತೋರಿಸುತ್ತೇವೆ ಎಂದರು.