ಬೆಂಗಳೂರು: ದೇವಸ್ಥಾನದಲ್ಲಿ ಭಜನೆ ಮಾಡುವಾಗಲೇ ಕಿಟಕಿಯಿಂದ ಕೈ ಹಾಕಿದ ಕಳ್ಳ ಮಹಿಳೆಯ ಸರ ಎಗರಿಸಿದ ಆಘಾತಕಾರಿ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ನ ಶಂಕರಪುರದ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.
ದೇವಾಲಯದಲ್ಲಿ ಮಹಿಳೆಯರು ಭಜನೆ ಮಾಡುವಾಗಲೇ ಈ ಘಟನೆ ನಡೆದಿದೆ. ಕಿಟಕಿ ಬಳಿ ಕುಳಿತಿದ್ದ ಮಹಿಳೆ ಭಜನೆ ಮಾಡುತ್ತಿದ್ದ ವೇಳೆಯಲ್ಲಿ ಕಿಟಕಿಯಿಂದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಸಿದುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು, ಭಜನೆ ಮಾಡುತ್ತಿದ್ದವರೆಲ್ಲ ಹೊರಬಂದು ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಈ ವೇಳೆಗಾಗಲೇ 30 ಗ್ರಾಂ ಸರ ಕಸಿದು ಕಳ್ಳ ಪರಾರಿಯಾಗಿದ್ದಾನೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.