ಬಾಲಿವುಡ್ ನಟ ಸಂಜಯ್ ದತ್ ಮತ್ತೊಮ್ಮೆ ಮದುವೆಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿರುವುದು ವೈರಲ್ ಆಗಿರುವ ಒಂದು ವಿಡಿಯೋ. ಮದುವೆಯಂತೆಯೇ ಆಚರಣೆಗಳನ್ನು ಮಾಡುತ್ತಿರುವ ಹೊಸ ವೀಡಿಯೊ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಸಂಜಯ್ ದತ್ ತಮ್ಮ ಪತ್ನಿ ಮಾನ್ಯತಾ ದತ್ ರೊಂದಿಗೆ ಹೋಮ ಕುಂಡಕ್ಕೆ ಸುತ್ತು ಹಾಕಿದ್ದಾರೆ.
ಆನ್ಲೈನ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಸಂಜಯ್ ಕಿತ್ತಳೆ ಬಣ್ಣದ ಕುರ್ತಾ ಮತ್ತು ಧೋತಿ ಧರಿಸಿದ್ದು, ಮಾನ್ಯತಾ ಕ್ರೀಮ್ ಕಲರಿನ ಸಲ್ವಾರ್ ಧರಿಸಿದ್ದಾರೆ. ʼಬಾಲಿವುಡ್ ಬಬಲ್ʼ ಪ್ರಕಾರ, ಸಂಜಯ್ ಮತ್ತು ಮಾನ್ಯತಾ ಅವರು ಗೃಹಪ್ರವೇಶದ ಪೂಜೆಯ ಸಮಯದಲ್ಲಿ ‘ಸಪ್ತಪದಿ’ ತುಳಿದಿದ್ದಾರೆ. ದಂಪತಿಗಳು ಇತ್ತೀಚೆಗಷ್ಟೇ ತಮ್ಮ ಮನೆಯನ್ನು ನವೀಕರಿಸಿದ್ದರು.
ಮಾನ್ಯತಾ, ಸಂಜಯ್ ದತ್ ಅವರ ಮೂರನೇ ಹೆಂಡತಿ. 16 ವರ್ಷಗಳ ಹಿಂದೆ ಅಂದರೆ 2008 ರಲ್ಲಿ ವಿವಾಹವಾದರು. ಈ ಜೋಡಿಯು ಗೋವಾದಲ್ಲಿ ವಿವಾಹವಾಗಿತ್ತು. ಅವರಿಗಿಂತ ಮೊದಲು ಸಂಜಯ್, ರಿಯಾ ಪಿಳ್ಳೈ ಅವರನ್ನು ಮದುವೆಯಾಗಿದ್ದರು. ರಿಯಾ ಏರ್ ಹೋಸ್ಟೆಸ್ ಮತ್ತು ಮಾಡೆಲ್ ಆಗಿದ್ದರು. ಅದಕ್ಕೂ ಮುನ್ನ ಸಂಜಯ್, ರಿಚಾ ಶರ್ಮಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ತ್ರಿಶಾಲಾ ದತ್ ಎಂಬ ಮಗಳು ಇದ್ದಳು. ರಿಚಾ 1996 ರಲ್ಲಿ ಬ್ರೈನ್ ಟ್ಯೂಮರ್ನಿಂದ ನಿಧನರಾದರು. ತ್ರಿಶಾ, ಸಂಜಯ್ ದತ್ ಅವರ ಈಗಿನ ಪತ್ನಿ ಮಾನ್ಯತಾ ಜೊತೆ ಅನ್ಯೋನ್ಯತೆಯಿಂದ ಇದ್ದಾರೆ.
ತ್ರಿಶಾಲಾ ಜೊತೆಗೆ, ಸಂಜಯ್ – ಮಾನ್ಯತಾಗೆ, ಅವಳಿಗಳಾದ ಶಹರಾನ್ ಮತ್ತು ಇಕ್ರಾ ಎಂಬ ಇನ್ನೂ ಇಬ್ಬರು ಮಕ್ಕಳಿದ್ದಾರೆ. “ನನ್ನ ಮೂವರು ಮಕ್ಕಳು ಸಂತೋಷದಿಂದ ಮತ್ತು ಅವರು ಏನು ಮಾಡಿದರೂ ಉತ್ಸಾಹದಿಂದ ಇರಬೇಕೆಂದು ನಾನು ಬಯಸುತ್ತೇನೆ. ನಾನು ಇಂದಿಗೂ ನಟಿಸುತ್ತಿದ್ದೇನೆ ಏಕೆಂದರೆ ನಾನು ಮಾಡುವ ಕೆಲಸವನ್ನು ನಾನು ಇಷ್ಟಪಡುತ್ತೇನೆ ಮತ್ತು ನಾನು ಅವರಿಗೆ ಅದೇ ರೀತಿ ಬಯಸುತ್ತೇನೆ. ತ್ರಿಶಾಲಾ ಮನೋವೈದ್ಯೆಯಾಗಿದ್ದು, ಆಪ್ತಸಮಾಲೋಚಕಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವಳು ತನ್ನ ಕೆಲಸವನ್ನು ಪ್ರೀತಿಸುತ್ತಾಳೆ ಮತ್ತು ನಾನು ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನನ್ನ ಇನ್ನಿಬ್ಬರು ಮಕ್ಕಳ ಪೈಕಿ, ಶಹರಾನ್ ಫುಟ್ಬಾಲ್ ಕಡೆಗೆ ವಾಲಿದ್ದರೆ, ಇಕ್ರಾ ಕಲಾವಿದೆ – ಅವಳ ವರ್ಣಚಿತ್ರಗಳು ಸುಂದರವಾಗಿವೆ. ಆಕೆಯ ವಯಸ್ಸಿನವರು ಇಷ್ಟು ಸುಂದರವಾಗಿ ಚಿತ್ರಿಸಬಲ್ಲರು ಎಂದು ನಂಬುವುದು ಕಷ್ಟ!” ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.