ಹೈದರಾಬಾದ್: ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರು ವಿಚ್ಛೇದನ ಪಡೆದುಕೊಳ್ಳಲು ಬಿ.ಆರ್.ಎಸ್. ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಕಾರಣ ಎಂದು ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖಾ ಹೊಸ ಬಾಂಬ್ ಸಿಡಿಸಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ನಾಗಾರ್ಜುನ ಮಾಲಿಕತ್ವದ ಎನ್ ಕನ್ವೆನ್ಷನ್ ಸೆಂಟರ್ ನೆಲಸಮಗೊಳಿಸುವುದು ಬೇಡವೆನ್ನುವುದಾದರೆ ತನ್ನ ಬಳಿ ಸಮಂತಾ ಅವರನ್ನು ಕಳಿಸುವಂತೆ ರಾಮರಾವ್ ಬೇಡಿಕೆ ಇಟ್ಟಿದ್ದರು. ರಾಮರಾವ್ ಬಳಿ ಹೋಗುವಂತೆ ಸಮಂತಾಗೆ ನಾಗಚೈತನ್ಯ ಅವರ ತಂದೆ ನಟ ನಾಗಾರ್ಜುನ ಬಲವಂತ ಮಾಡಿದ್ದರು. ಆದರೆ, ಆಕೆ ಅದನ್ನು ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಕೊಂಡಾ ಸುರೇಖಾ ಆರೋಪಿಸಿದ್ದಾರೆ.
ಕೆ.ಟಿ. ರಾಮರಾವ್ ಡ್ರಗ್ಸ್ ವ್ಯಸನಿಯಾಗಿದ್ದಾರೆ. ಚಿತ್ರರಂಗದ ಖ್ಯಾತ ತಾರೆಯರಿಗೆ ರೇವ್ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೆ ಅನೇಕ ನಟಿಯರು ಚಿತ್ರರಂಗವನ್ನೇ ತೊರೆದಿದ್ದಾರೆ. ಕೆಲವರು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂದು ಹೇಳಿದ್ದಾರೆ.
ಸಚಿವೆ ಸುರೇಖಾ ಅವರ ಹೇಳಿಕೆಗೆ ಅಕ್ಕಿನೇನಿ ನಾಗಾರ್ಜುನ ಆಕ್ಷೇಪ ವ್ಯಕ್ತಪಡಿಸಿದ್ದು, ಒಬ್ಬ ಸಚಿವೆಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಕೂಡಲೇ ನಿಮ್ಮ ಹೇಳಿಕೆ ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಬೇರೆಯವರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾಗಿ ನೀವು ಈ ರೀತಿ ಆರೋಪ ಮಾಡಬಾರದು ಎಂದು ನಾಗಾರ್ಜುನ ಹೇಳಿದ್ದಾರೆ.