ಬೆಂಗಳೂರು: ಕಳೆದ 6-7 ತಿಂಗಳಿನಿಂದ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದ್ದ ಚಾರಣ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಲಿದೆ. ಅರಣ್ಯ ಇಲಾಖೆ ಚಾರಣ ಪ್ರಕ್ರಿಯೆಗೆ ಶುಕ್ರವಾರದಿಂದ ಮತ್ತೆ ಚಾಲನೆ ನೀಡುತ್ತಿದ್ದು, ನಾಳೆಯಿಂದ ಆನ್ಲೈನ್ ಬುಕಿಂಗ್ ಶುರುವಾಗಲಿದೆ.
ಕುಮಾರ ಪರ್ವತ ಚಾರಣ ಪಥಕ್ಕೆ ಜನವರಿ 26, 27ರಂದು ಸಾವಿರಾರು ಜನ ಆಗಮಿಸಿದ್ದರಿಂದ ಗೊಂದಲ ಉಂಟಾಗಿತ್ತು. ಸಾವಿರಾರು ಜನ ಅರಣ್ಯ ಪ್ರದೇಶಕ್ಕೆ ಬರುವುದನ್ನು ತಡೆದು ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಚಾರಣ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ಚಾರಣ ಪಥಗಳಿಗೆ ತೆರಳುವವರಿಗೆ ಅನುಮತಿ ನೀಡುವುದು, ಚಾರಣ ಪಥಕ್ಕೆ ಪ್ರವೇಶ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಹೊಸ ವೆಬ್ಸೈಟ್ ಸಿದ್ಧಪಡಿಸಿದೆ. ಗುರುವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ವೆಬ್ಸೈಟ್ ಉದ್ಘಾಟಿಸಲಿದ್ದು, ಅದರಿಂದ ಚಾರಣಿಗರು ಟಿಕೆಟ್ ಖರೀದಿಸಿ ಶುಕ್ರವಾರದಿಂದ ಚಾರಣಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.