alex Certify ALERT : ಸಾರ್ವಜನಿಕರೇ ‘ರೇಬಿಸ್’ ನಿರ್ಲ್ಯಕ್ಷಿಸಿದ್ರೆ ಸಾವು ಖಚಿತ, ಇರಲಿ ಈ ಎಚ್ಚರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಸಾರ್ವಜನಿಕರೇ ‘ರೇಬಿಸ್’ ನಿರ್ಲ್ಯಕ್ಷಿಸಿದ್ರೆ ಸಾವು ಖಚಿತ, ಇರಲಿ ಈ ಎಚ್ಚರ..!

ಶಿವಮೊಗ್ಗ : ರೇಬಿಸ್ ಖಾಯಿಲೆ ಬಂದರೆ ಸಾವು ಖಚಿತ. ಆದ್ದರಿಂದ ಎಲ್ಲರೂ ನಾಯಿ ಮತ್ತು ಇತರೆ ಪ್ರಾಣಿಗಳ ಕಡಿತದಿಂದ ದೂರ ಇರಬೇಕು. ಕೇವಲ ಕಡಿತ ಮಾತ್ರವಲ್ಲ ತರಚಿದ್ದರೂ ಆಂಟಿ ರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಡಿಹೆಚ್ಓ ಡಾ.ನಟರಾಜ್ ಎಚ್ಚರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಎನ್.ಸಿ.ಡಿ ಘಟಕ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ನಂಜಪ್ಪ ಗ್ರೂಪ್ ಆಫ್ ಹಾಸ್ಪಿಟಲ್ ಮತ್ತು ಎಜುಕೇಷನ್ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನ ಮತ್ತು ವಿಶ್ವ ಹೃದಯ ದಿನವನ್ಬು ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲ ನಾಯಿ ಮತ್ತು ಇತರೆ ಪ್ರಾಣಿಗಳನ್ನು ಪ್ರೀತಿಸುತ್ತೇವೆ. ಅವೂ ನಮ್ಮನ್ನು ಪ್ರೀತಿಸುತ್ತವೆ. ಆದರೆ ನಾಯಿಗಳು/ಪ್ರಾಣಿಗಳು ಕೆಲವೊಮ್ಮೆ ಅಪಾಯಕಾರಿಯೂ ಆಗಿರುತ್ತವೆ. ಆದ್ದರಿಂದ ನಾವು ಸಾಕಿದ ನಾಯಿಗಳಿಗೆ ಮತ್ತು ಬೀದಿ ನಾಯಿಗಳಿಗೆ ಆಂಟಿ ರೇಬಿಸ್ ಲಸಿಕೆಯನ್ನು ನಿಯಮಿತವಾಗಿ ಕೊಡಿಸಬೇಕು. ರೇಬಿಸ್ ಬಂದ ನಂತರ ಅದಕ್ಕೆ ಚಿಕಿತ್ಸೆ ಇಲ್ಲ. ಸಾವು ಖಚಿತ. ಆದರಿಂದ ಮುನ್ನೆಚ್ಚರಿಕೆ ಅತಿ ಅಗತ್ಯ. ನಾಯಿ, ಬೆಕ್ಕು ಇತರೆ ಪ್ರಾಣಿಗಳು ಕಡಿದರೆ, ತರಚಿದರೂ ನಿರ್ಲಕ್ಷ ಮಾಡದೇ ಆಂಟಿ ರೇಬಿಸ್ ಲಸಿಕೆ ಪಡೆಯಬೇಕು.

ಭಾನುವಾರ ಶಿಕಾರಪುರದಲ್ಲಿ ಹುಚ್ಚು ನಾಯಿಯೊಂದು 41 ಜನರನ್ನು ಕಚ್ಚಿದೆ. ಆ ನಾಯಿ ಕಚ್ಚಿದ ಎಲ್ಲರಿಗೆ ಆಂಟಿ ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಲಸಿಕೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 4 ಜನರು ನಾಯಿ ಕಡಿತದಿಂದ ಸಾವನ್ನಪ್ಪಿದ್ದಾರೆ.ಹೃದಯದ ಆರೋಗ್ಯಕ್ಕಾಗಿ ಒತ್ತಡ ನಿರ್ವಹಣೆ ಮಾಡಬೇಕು. ನಿಯಮಿತವಾಗಿ ವ್ಯಾಯಾಮ, ಧ್ಯಾನ, ಹಾಗೂ ಸಾಕಷ್ಟು ವಿಶ್ರಾಂತಿ ಅಗತ್ಯ. ಇತ್ತೀಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತದಿಂದ ಹೆಚ್ಚು ಸಾವನ್ನಪ್ಪುತ್ತಿದ್ದು, ಉತ್ತಮ ಜೀವನ ಶೈಲಿ , ಆಹಾರ ಕ್ರಮ, ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ನಾವು ನಾಯಿ ಕಡಿತದಿಂದ ದೂರ ಇರಬೇಕು. ಬೆಕ್ಕು ಕಡಿತದಿಂದಲೂ ಎರಡು ಸಾವಾಗಿದೆ. ಆದ್ದರಿಂದ ರೇಬಿಸ್ ಖಾಲಿಯೆ ಬಗ್ಗೆ ಜಾಗೃತರಾಗಿರಬೇಕು. ರೇಬಿಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಇತ್ತೀಚೆಗೆ ಹೃದಯ ಸಂಬಂಧಿ ಖಾಯಿಲೆಗಳು ಮೊದಲನೇ ಸ್ಥಾನದಲ್ಲಿದೆ. ಆಹಾರವನ್ನ ಔಷಧಿ ರೀತಿಯಲ್ಲಿ ತಗೋಬೇಕು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ, ಉತ್ತಮ ಜೀವನ ಶೈಲಿ ಅಳವಡಿಕೊಳ್ಳಬೇಕು. ಫಾಸ್ಟ್ ಫುಡ್ನಲ್ಲಿರುವ ಟ್ರಾನ್ಸ್ಫ್ಯಾಟ್ ತುಂಬಾ ಅಪಾಯಕಾರಿಯಾಗಿದ್ದು ಇದರಿಂದ ದೂರ ಇರಬೇಕು ಎಂದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ, ಸೌಲಭ್ಯಗಳು ಲಭ್ಯವಿದೆ. ಸುಸಜ್ಜಿತವಾದ ಕಾರ್ಡಿಯಾಲಜಿ ವಿಭಾಗ ಕೆಲಸ ನಿರ್ವಹಿಸುತ್ತಿದ್ದು, ಇದುವರೆಗೆ 2900 ಆಂಜಿಯೋಗ್ರಾಮ್, 900 ಆಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಎಬಿಎಆರ್ಕೆ ಮತ್ತು ಬಿಪಿಎಲ್ ಕಾರ್ಡು ಹೊಂದಿದವರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. 20 ಕಾರ್ಡಿಯಾಕ್ ಬೆಡ್ ಸೌಲಭ್ಯವಿದೆ. ಸಾಮಾನ್ಯ ವರ್ಗದವರಿಗೆ ಸಿಂಗಲ್ ಸ್ಟಂಟ್ ಅಳವಡಿಸಲು ರೂ.88,000/- ಡಬಲ್ 1,28,000 ಮತ್ತು ತ್ರಿಬಲ್ ಸ್ಟಂಟ್ ಅಳವಡಿಕೆಗೆ ರೂ. 1,48,000/- ಆಗುತ್ತದೆ ಎಂದು ಡಾ.ತಿಮ್ಮಪ್ಪ, ವೈದ್ಯಕೀಯ ಅಧೀಕ್ಷಕರು, ಮೆಗ್ಗಾನ್ ಬೋಧನಾ ಆಸ್ಪತ್ರೆ ಇವರು ತಿಳಿಸಿದರು.

ಆರ್ಸಿಹೆಚ್ಓ ಡಾ.ಓ.ಮಲ್ಲಪ್ಪ ಮಾತನಾಡಿ, ರೇಬಿಸ್ ಬಂದ ಮೇಲೆ ಬದುಕಲು ಸಾಧ್ಯವಿಲ್ಲ. ನಾಯಿ ಕಡಿತ ಆದ ತಕ್ಷಣ ನಿರ್ಲಕ್ಷಿಸದೇ ಲಸಿಕೆ ಪಡೆಯಬೇಕು. 28 ದಿನದಲ್ಲಿ 4 ಡೋಸ್ಗಳನ್ನು ಪಡೆಯಲೇಬೇಕು. ವರ್ಷದಲ್ಲಿ 25 ರಿಂದ 30 ಸಾವಿರ ನಾಯಿ ಕಡಿತ ಪ್ರಕರಣ ಸಂಭವಿಸುತ್ತದೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು. ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.

ರೇಬಿಸ್ ಖಾಯಿಲೆ ಬಂದ ಎರಡು ಮೂರು ದಿನದಲ್ಲಿ ರೋಗಿ ಸಾಯುತ್ತಾನೆ. ಯಾವುದೇ ಪ್ರಾಣಿ ಕಚ್ಚಿದರೂ ರೇಬಿಸ್ ಬರಬಹುದು. ಶೇ. 97 ರಷ್ಟು ನಾಯಿ ಕಡಿತದಿಂದ ಬಂದರೆ ಶೇ. 3 ರಷ್ಟು ಬೆಕ್ಕು, ಕಾಡು ಪ್ರಾಣಿ ಕಚ್ಚುವಿಕೆಯಿಂದ ಬರುತ್ತದೆ. ಜನರಲ್ಲಿ, ನಾಯಿ ಮಾಲೀಕರಲ್ಲಿ ಈ ಬಗ್ಗೆ ಅರಿವು ಹೆಚ್ಚಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನರಲ್ಲಿ ರೇಬಿಸ್ ಕಾಯಿಲೆಯ ಬಗ್ಗೆ ಮಾಹಿತಿ ನೀಡಿ ಜಾಗೃತಗೊಳಿಸುವುದು ವಿಶ್ವ ರೇಬಿಸ್ ದಿನಾಚರಣೆ ಉದ್ದೇಶವಾಗಿದೆ. ಆಂಟಿ ರೇಬಿಸ್ ಲಸಿಕೆ ಕಂಡು ಹಿಡಿದ ಲೂಯಿಸ್ ಪಾಶ್ಚರ್ ಸ್ಮರಣಾರ್ಥ ಸೆ.28 ರಂದು ಪ್ರತಿ ವರ್ಷ ವಿಶ್ವ ರೇಬಿಸ್ ದಿನ ಆಚರಿಸಲಾಗುತ್ತದೆ. ರೇಬಿಸ್ ವೈರಸ್ ಹೊಂದಿದ ನಾಯಿ ಕಚ್ಚಿದರೆ ಆಂಟಿ ರೇಬಿಸ್ ಲಸಿಕೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಾವು ಸಂಭವಿಸುತ್ತದೆ. ಈ ವರ್ಷ ಜಿಲ್ಲೆಯಲ್ಲಿ 17000 ಕ್ಕು ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ಕಡ್ಡಾಯವಾಗಿ ಟಿಟಿ ಮತ್ತು ಆಂಟಿ ರೇಬಿಸ್ ಲಸಿಕೆ ಪಡೆಯಬೇಕು. ಹಾಗೂ ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಇತ್ತೀಚಿನ ದಿನಗಳಲ್ಲಿ 30 ರಿಂದ 40 ರೊಳಗಿನ ಯುವಜನತೆ ಹೃದಯಾಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದು, ಜೀವನ ಶೈಲಿ ಬದಲಾವಣೆ ಅಗತ್ಯವಿದೆ. ಧೂಮಪಾನ, ಒತ್ತಡದಿಂದ ದೂರ ಇರಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಹೃದಯಕ್ಕೆ ಸಂಬಂಧಿಸಿದ ಯಾವುದೇ ಖಾಯಿಲೆ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬರಬೇಕು. ತಮ್ಮ ಹೃದಯಕ್ಕಾಗಿ ಪ್ರತಿ ದಿನ ಒಂದು ಗಂಟೆ ವಾಕ್ ಮಾಡಬೇಕೆಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...