ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿ ವಿತರಣೆ, ಆದಾಯ ಪ್ರಮಾಣ ಪತ್ರ ವಿತರಣೆಗೆ ಪ್ರಸ್ತುತ ಇರುವ ಮಾನದಂಡ ಮತ್ತು ಪ್ರಕ್ರಿಯೆ ಪರಿಶೀಲಿಸಿ ಪರಿಷ್ಕರಿಸಲು ಸಲಹೆ ಸೂಚನೆ ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಬಿಪಿಎಲ್ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ ದುರ್ಬಳಕೆಗೆ ಕಡಿವಾಣ ಹಾಕಲು, ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ವೆಚ್ಚ ತಗ್ಗಿಸಲು, ಅರ್ಹರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವುದು ಸಮಿತಿ ರಚನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಕೂಡ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಸುಳ್ಳು ಆದಾಯ ಪ್ರಮಾಣ ಪತ್ರ ಪಡೆದಿರುವ ದೂರುಗಳು ಗಮನಕ್ಕೆ ಬಂದಿದೆ. ಉಪಸಮಿತಿಯು ಬಿಪಿಎಲ್ ಕಾರ್ಡ್ ವಿತರಣೆಗೆ ಇರುವ ಮಾನದಂಡ ಪರಿಶೀಲನೆ, ಆದಾಯ ಪ್ರಮಾಣ ಪತ್ರ ನೀಡಲು ಇರುವ ಪ್ರಕ್ರಿಯೆಗಳು ಸೇರಿ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಬಗ್ಗೆ ಪರಿಶೀಲಿಸಿ ಪರಿಷ್ಕರಣೆಗೆ ಸಲಹೆ ಸೂಚನೆ ನೀಡಲಿದೆ ಎಂದು ಹೇಳಿದ್ದಾರೆ.