ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ಅಕ್ರಮಗಳ ಬಗ್ಗೆ ವ್ಯವಸ್ಥಿತ ಸುಲಿಗೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಐಪಿಎಸ್ ಅಧಿಕಾರಿ ಚಂದ್ರಶೇಖರ್, ಉದ್ಯಮಿ ವಿಜಯ್ ತಾತಾ ಅಕ್ರಮಗಳ ಬಗ್ಗೆ ದಾಖಲೆ ಸಮೇತ ವಿವರಿಸಿದರು.
ಪೊಲೀಸ್ ಇಲಾಖೆಯಲ್ಲಿ ದರೋಡೆಕೋರರು ಇದ್ದಾರೆ ಎಂದು ಹೇಳಿದ್ದೆ. ಅದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ನೋಡಿ… ದೆಹಲಿಯಲ್ಲಿ PACL ಎಂಬ ಕಂಪನಿ ಇದೆ. ಭೂಮಿ ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡುವ ಕೆಲಸ ಇದು ಮಾಡುತ್ತದೆ. ಎರಡು ಲಕ್ಷ ಕೋಟಿ ಆಸ್ತಿಯನ್ನು ಕಂಪನಿ ಹೊಂದಿತ್ತು. ವಿಜಯ್ ತಾತಾ ಎಂಬವರು ಖಾಸಗಿ ವಾಹಿನಿ ನಡೆಸುತ್ತಿದ್ದರು. ಆ ವಾಹಿನಿ ಮುಚ್ಚಿ ಹೋಯಿತು, ಈಗ ಮತ್ತೊಂದು ಖಾಸಗಿ ಚಾನಲ್ ಇಟ್ಟಿಕೊಂಡು ಫೋರ್ಜರಿ ಮಾಡಲಾಗಿದೆ. ಆ ಇಡೀ ಹಗರಣಕ್ಕೆ ಈ ಚಂದ್ರಶೇಖರ ಗಾಡ್ ಫಾದರ್!
2023 ಫೆಬ್ರುವರಿಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ದೂರು ಕೊಡಲಾಗುತ್ತದೆ. ಹಣ ವಾಪಸ್ ಪಡೆದುಕೊಳ್ಳಲು ಸಮಿತಿ ಮಾಡಲಾಗುತ್ತದೆ. ಎಲ್ಲಾ ಕಡೆ ಫೋರ್ಜರಿ ಮಾಡಿರುವ ವಿಜಯ್ ತಾತಾ ಮೇಲೆ ಎರಡೂವರೆ ಸಾವಿರ ಎಫ್ ಐಆರ್ ದಾಖಲಾಗಿವೆ. ಈವರೆಗೆ ಒಂದು ಎಫ್ ಐಆರ್ ಮೇಲೆಯೂ ಕ್ರಮ ಆಗಿಲ್ಲ. 2013 ಜೂನ್ 8ರಂದು PACL ಕಂಪನಿಯ ಮೇಲೆ ರಾಜಗೋಪಾಲ್ ನಗರ ಠಾಣೆಯಲ್ಲಿ ಶಿವಕುಮಾರ್ ಎಂಬುವವರು ದೂರು ನೀಡುತ್ತಾರೆ. ವಿಜಯ್ ತಾತಾನೇ ಈತನ ಕೈಯಿಂದ ದೂರು ಕೊಡಿಸುತ್ತಾನೆ. ₹50,000 ಹಣವನ್ನು PACL ಕಂಪನಿಗೆ ಕಟ್ಟಿಸುತ್ತಾನೆ. ಮಾರನೇ ದಿನ ಆತನೇ ದೂರು ಕೊಡಿಸುತ್ತಾನೆ. ಆಗ ಸಿಸಿಬಿನಲ್ಲಿ ಈ ಚಂದ್ರಶೇಖರ್ ಇದ್ದರು. 8ನೇ ತಾರೀಖು ಸಂಜೆ 4 ಗಂಟೆಗೆ ದೂರು ದಾಖಲಾಗುತ್ತದೆ. ಸಂಜೆ 8 ಗಂಟೆಗೆ ಇಲ್ಲಿಂದ ಪೊಲೀಸರನ್ನು ಕಳುಹಿಸರುತ್ತಾರೆ. ಆ ಕಂಪನಿಯವರ ಮನೆ ಬಳಿ ಹೋಗಿ ಭಯಪಡಿಸುತ್ತಾರೆ, ಹೆದರಿಸುತ್ತಾರೆ. ಪೊಲೀಸರ ಬಳಿ ಹೋಗಿ ಮಾತಾಡಿಸುತ್ತೇನೆ, ₹100 ಕೋಟಿ ಕೊಡಿ ಎಂದು ವಿಜಯ್ ತಾತಾ ಹೇಳುತ್ತಾನೆ. ಅದರಲ್ಲಿ ₹80 ಕೋಟಿ ನಗದು, ₹21 ಕೋಟಿ ಚೆಕ್ ಕೊಡುತ್ತಾರೆ ಎಂದು ದಾಖಲೆಗಳನ್ನು ಮುಂದಿಟ್ಟಿದ್ದಾರೆ.
ಹಿಂದೆ ಶ್ರೀಧರ್ ಎಂಬ ರೌಡಿ ಇದ್ದ. ಆತನ ಬಗ್ಗೆ ಹಾಗೂ ವಿಜಯ್ ತಾತಾ ಏನೇನು ಆಟ ಆಡಿದ್ದ ಎನ್ನುವುದು ಅಧಿಕಾರಿ ಚಂದ್ರಶೇಖರ್ ಗೆ ಚೆನ್ನಾಗಿ ಗೊತ್ತಿತ್ತು. ಶ್ರೀಧರ್ ನ ಮತ್ತೆ ಜೈಲಿಗೆ ಕಳುಹಿಸಲು ಇವರು ಪ್ರಯತ್ನ ಮಾಡಿದರು. ಎಚ್ಚೆತ್ತ ಶ್ರೀಧರ್ ಇದೇ ವಿಜಯ್ ತಾತಾ ವಿರುದ್ಧ ದೂರು ದಾಖಲು ಮಾಡುತ್ತಾನೆ. ವಿಜಯ್ ತಾತಾ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಆಗುತ್ತಾನೆ. ಆ ಸಂದರ್ಭದಲ್ಲಿ ಈ ಅಧಿಕಾರಿ ಚಂದ್ರಶೇಖರ್ ಮಾಡಿದ್ದೇನು? ಈತನಿಗೆ ಐಜಿ ಕೆಲಸ ಕೊಟ್ಟಿದ್ದು ಇಂಥ ನಟೋರಿಯಸ್ ಮಾಡೋಕಾ? ಕೇಸ್ ನಡೆಸಿ ಅಂದ್ರೆ ಸ್ಟೇ ತೆಗೆದುಕೊಂಡಿದ್ದಾರೆ. ಕಿಶೋರ್ ಎಂಬ ಇನ್ಸ್‌ಪೆಕ್ಟರ್ ಒಬ್ಬರನ್ನು ಸಹ ಇವರು ಬ್ಲಾಕ್ ಮೇಲ್ ಮಾಡುತ್ತಾರೆ. ಆಗ ₹20 ಕೋಟಿ ಹಣವನ್ನು ಚಂದ್ರಶೇಖರ್ ಡಿಮ್ಯಾಂಡ್ ಮಾಡುತ್ತಾರೆ. ಸಂಜೆಯೊಳಗೆ ₹2 ಕೋಟಿ ಕೊಡಬೇಕು ಎಂದು ಧಮ್ಕಿ ಹಾಕುತ್ತಾರೆ ಈ ಅಧಿಕಾರಿ. ಇಂಥ ಅಧಿಕಾರಿ ರಾಜ್ಯಪಾಲರ ಸಿಬ್ಬಂದಿ ತನಿಖೆಗೆ ಅನುಮತಿ ಕೇಳುತ್ತಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಹೀಗೆ ವಸೂಲಿ ಮಾಡಿದ ಹಣದಲ್ಲಿ ಆರ್.ಟಿ.ನಗರ ಆಕ್ಸಿಸ್ ಬ್ಯಾಂಕ್ ಶಾಖೆಗೆ ₹21 ಕೋಟಿ ವರ್ಗಾವಣೆ ಆಗುತ್ತದೆ. ₹50 ಕೋಟಿಯನ್ನು ಚೆಕ್ ಗಳನ್ನು ಬೇರೆ ಬೇರೆಯವರ ಹೆಸರಿನಲ್ಲಿ ಬರೆಸಿಕೊಂಡು ಚಂದ್ರಶೇಖರ್ ಬ್ಯಾಂಕ್ ಖಾತೆಗೆ ಹಾಕಿಸುತ್ತಾರೆ. ಇಲ್ಲಿ ವಿಜಯ್ ತಾತಾ ತನ್ನ ಜತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬುವರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಹಾಗೆಯೇ PACL ಕಂಪನಿಗೆ ಹೆದರಿಸಿ ಸತೀಶ್ ಎಂಬರನ್ನು ಕಳುಹಿಸಿ ₹10 ಕೋಟಿಯನ್ನು ಮತ್ತೆ ವಸೂಲಿ ಮಾಡುತ್ತಾರೆ. ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದಾಗ ಮಂಜುನಾಥ್ ಎಲ್ಲವನ್ನೂ ಬಾಯಿ ಬಿಡುತ್ತಾರೆ. ಆಮೇಲೆ ಚಂದ್ರಶೇಖರ್, ವಿಜಯ್ ತಾತಾ ಅಕ್ರಮ ಬಯಲಿಗೆ ಬರುತ್ತದೆ ಎಂದು ಹೇಳಿದರು.
ಇವರ ಅಕ್ರಮಗಳು ಇಲ್ಲಿಗೇ ನಿಲ್ಲುವುದಿಲ್ಲ. ಆಂಬಿಡೆಂಟ್ ಎಂಬ ಕಂಪನಿಯಿಂದ ₹30 ಕೋಟಿ ವಸೂಲಿ ಮಾಡುತ್ತಾರೆ. ಇನ್ನೂ ಹಲವಾರು ಕಂಪನಿಗಳಿಗೆ ಇವರು ಹೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಎಲ್ಲಾ ದಂಧೆಯಲ್ಲಿ ಚಂದ್ರಶೇಖರ್ ಪಾಲು ಹೊಂದಿದ್ದಾರೆ ಎಂದು ತಿಳಿಸಿದರು.