ಬೆಂಗಳೂರು: ದೇಶಾದ್ಯಂತ 122 ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ಜನ ಸೈಬರ್ ವಂಚಕರನ್ನು ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಆನ್ ಲೈನ್ ಟಾಸ್ಕ್ ಫ್ರಾಡ್ ಅಥವಾ ಆನ್ ಲೈನ್ ಉದ್ಯೋಗ ವಂಚನೆ ಜಾಲದ ಮೂಲಕ ಜನರನ್ನು ವಂಚಿಸುತ್ತಿದ್ದರು. ಈ ವಂಚನೆ ಜಾಲದ ಕಿಂಗ್ ಪಿನ್ ಗಳು ಚೀನಾದಿಂದ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
10 ವಂಚಕರ ಪೈಕಿ ಮೂವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಕ್ ಔಟ್ ನೊಟೀಸ್ ಮೂಲಕ ಬಂಧಿಸಲಾಗಿದೆ. ಆರೋಪಿಗಳು ಪೀಣ್ಯದ ನೆಲಗದರನಹಳ್ಳಿಯ ಕಚೇರಿ ಜಾಗದಲ್ಲಿ ಆಕ್ಟೀವ್ ಆಗಿದ್ದರು.
25 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಜುಲೈನಲ್ಲಿ ಸೈಬರ್ ಕ್ರೈಂ ಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು,.
ಬಂಧಿತ ಆರೋಪಿಗಳಿಂದ 72 ಮೊಬೈಲ್ ಫೋನ್, 182 ಡೆಬಿಟ್ ಕಾರ್ಡ್ ಗಳು, ವಿವಿಧ ಟೆಲಿಕಾಂ ಆಪರೇಟರ್ ಗಳ 133 ಸಿಮ್ ಕಾರ್ಡ್ ಗಳು, 127 ಬ್ಯಾಂಕ್ ಪಾಸ್ ಬುಕ್ ಗಳು ಮತ್ತು 1.74 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಂತ್ರಸ್ತರಿಗೆ ವಂಚಿಸಲು ಬಳಸಿದ ಖಾತೆಗಳಲ್ಲಿದ್ದ 7.34 ಲಕ್ಷ ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬಂಧಿತರನ್ನು ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಾಹೀನ್, ಮೊಹಮ್ಮದ್ ಮುಝುಮ್ಮಿಲ್, ತೇಜಸ್, ಚೇತನ್, ವಾಸಿಂ, ಸೈಯದ್ ಜೈದ್, ಸಾಹಿ ಅಬ್ದುಲ್ ಅನನ್ ಮತ್ತು ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ.