ಹಾಸನ: ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ ಬರೆಯಲು ಅವಕಾಶ ನೀಡಲಾಗಿದ್ದು, ಆದರೂ ಅನುತ್ತೀರ್ಣರದಲ್ಲಿ ಅಂತಹ ವಿದ್ಯಾರ್ಥಿಗಳು ಪುನಃ ಶಾಲಾ ಕಾಲೇಜುಗಳಿಗೆ ದಾಖಲಾಗಿ ಕಲಿಯಲು ಅವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಅರಕಲಗೂಡಿನ ಶಿಕ್ಷಕರ ಭವನದ ಆವರಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನುರ್ತೀಣರಾದ ವಿದ್ಯಾರ್ಥಿಗಳನ್ನು ಶಾಲೆಗೆ ಪುನಃ ದಾಖಲೆ ಮಾಡಿಕೊಳ್ಳಲು ಶಿಕ್ಷಕರು ಮುತುವರ್ಜಿ ವಹಿಸಿ. ಆ ಮಕ್ಕಳ ಕಲಿಕೆಗೆ ಕಾಳಜಿವಹಿಸಿ ವಿಶೇಷ ತರಬೇತಿ ನೀಡಿ ಮಕ್ಕಳಿಗೆ ಸಹಕಾರ ನೀಡುವಂತೆ ತಿಳಿಸಿದರು.
ಶಾಲೆಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಪೀಠಿಕೆಯನ್ನು ತಪ್ಪದೆ ಪ್ರತಿದಿನ ಓದಿಸಲು ಶಿಕ್ಷಕರು ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಶಿಕ್ಷಕರು ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ಮಕ್ಕಳ ಕಲಿಕೆಗೆ ಉತ್ತಮ ಆರೋಗ್ಯ ಕೂಡ ಬಹುಮುಖ್ಯ. ಈ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ ನೀಡಲಾಗುತ್ತಿದೆ. ಸರ್ಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿತ್ತು. ಅಪೌಷ್ಠಿಕತೆ ನಿರ್ವಹಣೆಗಾಗಿ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತದೆ. ಅಜೀಂ ಪ್ರೇಮ್ ಜಿ ಸಂಸ್ಥೆಯು 1591 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ವಾರದಲ್ಲಿ ನಾಲ್ಕು ದಿನ ಮೊಟ್ಟೆ ನೀಡಲು ಆರ್ಥಿಕ ನೆರವು ನೀಡಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ 1008 ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿ ಪ್ರಾರಂಭಿಲಾಗಿದ್ದು, 41,800 ಮಕ್ಕಳು ದಾಖಲಾಗಿದ್ದಾರೆ. ರಾಜ್ಯಾದ್ಯಂತ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂಬ ಮನೋಭಾವನೆ ಬರಬೇಕು ಎಂದರು.
ರಾಜ್ಯದಲ್ಲಿ 500 ಕೆ.ಪಿ.ಎಸ್. ಶಾಲೆಗಳ ಪ್ರಾರಂಭ ಮಾಡಲಾಗುವುದು. ಇದರಿಂದ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು ಕೆ.ಪಿ.ಎಸ್. ಶಾಲೆಗಳಲ್ಲಿ ವೀಲಿನವಾಗುತ್ತವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೂ ಸೇರಿದಂತೆ ಒಟ್ಟು 56 ಸಾವಿರ ಶಾಲೆಗಳಿದ್ದು, 1.08 ಕೋಟಿ ಮಕ್ಕಳಿದರೆ ಕಳೆದ 9 ತಿಂಗಳಲ್ಲಿ 12,500 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ 5800 ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂದರು.
ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ 25 ಸಾವಿರ ಮಕ್ಕಳಿಗೆ ಉಚಿತ ಸಿಇಟಿ ಕೋಚಿಂಗ್ ನೀಡಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡಗಳಿಗೂ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ನಂತರ ಸಚಿವರು ಅರಕಲಗೂಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆ ವೀಕ್ಷಣೆ ಮಾಡಿದರು.
ಸಂಸದರಾದ ಶ್ರೇಯಸ್ ಪಟೇಲ್, ಶಾಸಕ ಎ.ಮಂಜು ಮಾತನಾಡಿದರು. ಹುಣಸೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಿರೀಶ್ ಹೆಚ್.ಎನ್. ಉಪನ್ಯಾಸ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡು, ತಹಶೀಲ್ದಾರ್ ಸೌಮ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.