ಬೆಂಗಳೂರು: ರಾಜ್ಯಪಾಲರಿಂದ ಬರುವ ಯಾವುದೇ ಪತ್ರಗಳಿಗೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಯಾವುದೇ ಅಧಿಕಾರಿ ಉತ್ತರ ಕೊಡುವಂತಿಲ್ಲ ಎಂದು ಸರ್ಕಾರ ತಾಕೀತು ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜಭವನದ ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದೆ.
ರಾಜ್ಯಪಾಲರು ಬಯಸುವ ಯಾವುದೇ ಮಾಹಿತಿ, ವರದಿಗಳನ್ನು ಸರ್ಕಾರದ ಒಪ್ಪಿಗೆ ಪಡೆಯದೆ ನೀಡಬಾರದು ಎಂದು ಮುಖ್ಯ ಕಾರ್ಯದರ್ಶಿಗೆ ಸಂಪುಟ ಕಟ್ಟಪ್ಪಣೆ ಮಾಡಿದೆ. ಈ ಮೂಲಕ ವಿವಿಧ ವಿಚಾರಗಳ ಬಗ್ಗೆ ಸ್ಪಷ್ಟನೆ ವರದಿ ಕೇಳುತ್ತಿರುವ ರಾಜ್ಯಪಾಲರಿಗೆ ಸರ್ಕಾರ ಸೆಡ್ಡು ಹೊಡೆದಂತಾಗಿದೆ. ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅಥವಾ ಸರ್ಕಾರದ ಯಾವುದೇ ಅಧಿಕಾರಿಗೆ ಬರುವ ಪತ್ರ ಅಥವಾ ಸೂಚನೆಗಳನ್ನು ಆಧರಿಸಿ ಕ್ರಮವಹಿಸುವ ಮುನ್ನ ಸಚಿವ ಸಂಪುಟದ ಗಮನಕ್ಕೆ ತರಬೇಕು. ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರ್ಣಯ ಆಧರಿಸಿ ಮುಖ್ಯ ಕಾರ್ಯದರ್ಶಿಗಳು ಮಾತ್ರವೇ ರಾಜಭವನಕ್ಕೆ ಮಾಹಿತಿ ನೀಡಬೇಕು ಎಂದು ಸಂಪುಟ ಸಭೆ ನಿರ್ಣಯ ಅಂಗೀಕರಿಸಿದೆ.