ಬೆಂಗಳೂರು : ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ರಾಜೀನಾಮೆ ನೀಡುವಂತೆ ವಿಪಕ್ಷಗಳು ಬಿಗಿ ಪಟ್ಟು ಹಿಡಿದಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬಿಜೆಪಿ-ಜೆಡಿಎಸ್ ಬಿಗಿ ಪಟ್ಟು ಹಿಡಿದಿದೆ.
ಜೆಡಿಎಸ್ ಒತ್ತಾಯ
ಮಿಸ್ಟರ್ ಸಿದ್ದಣ್ಣ ಅವರೇ…., ಅಂದು ನೀವೇ ಆಡಿದ್ದ ಮಾತಿಗೆ ಇಂದು ಬದ್ಧರಾಗಿ ಮುಡಾ ಪ್ರಕರಣದಲ್ಲಿ ಸಿದ್ದರಾಮು್ಉ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕು. ಈಗ ರಾಜ್ಯದ ಮುಖ್ಯಮಂತ್ರಿ ನೀವೇ ಆಗಿದ್ದೀರಿ.. ಎಲ್ಲಾ ತನಿಖಾ ಸಂಸ್ಥೆಗಳು ನಿಮ್ಮ ಅಧೀನದಲ್ಲೇ ಇವೆ. ಗೃಹ ಇಲಾಖೆ ಮತ್ತು ಪೊಲೀಸರು ನಿಮ್ಮ ಅಡಿಯಲ್ಲಿ ಕೆಲಸ ಮಾಡುತ್ತಾರೆ. ನೀವು ಮುಖ್ಯಮಂತ್ರಿ ಹುದ್ದೆಯಲ್ಲೇ ಇದ್ದರೇ ನ್ಯಾಯಸಮ್ಮತ ತನಿಖೆ ಸಾಧ್ಯವೇ..? ಸಿಎಂ ಆಗಿ ಮುಂದುವರಿಯುವ ಅರ್ಹತೆ ನಿಮಗಿಲ್ಲ.. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಬಿಜೆಪಿ ಟ್ವೀಟ್
ಸಿಎಂ ಸಿದ್ದರಾಮಯ್ಯ ಅವರೆ, ನಾನ್ಯಾಕೆ ರಾಜೀನಾಮೆ ಕೊಡಬೇಕು ಎನ್ನುವ ನಿಮ್ಮ ಭಂಡತನಕ್ಕೆ ಹೈಕೋರ್ಟ್ ಸ್ಪಷ್ಟ ಉತ್ತರ ನೀಡಿದೆ. ಹೈಕೋರ್ಟ್ ತೀರ್ಪನ್ನು ಗೌರವಿಸಿ ಮೊದಲು ರಾಜೀನಾಮೆ ನೀಡಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.