ಬೆಂಗಳೂರು: ರಾಜ್ಯಪಾಲರು ಪದೇ ಪದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಪೊಲೀಸ್ ಸ್ಟೇಷನ್, ತನಿಖಾ ಏಜೆನ್ಸಿಗಳೇ ಬೇಡ. ಎಲ್ಲವನ್ನೂ ರಾಜ್ಯಪಾಲರೇ ನೋಡಿಕೊಳ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಪೊಲೀಸರು, ತನಿಖಾ ಏಜೆನ್ಸಿಗಳು ರಾಜ್ಯದಲ್ಲಿ ಬೇಡ. ರಾಜ್ಯಪಾಲರಿಗೆ ದೂರು ನೀಡಿದರೆ ಸಾಕು ಅವರೇ ಎಲ್ಲವನ್ನೂ ನೋಡಿಕೊಳ್ತಾರೆ. ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರು, ತನಿಖಾ ಏಜೆನ್ಸಿಗಳು ಮಾಡಬೇಕಿರುವುದನ್ನು ರಾಜ್ಯಪಾಲರೇ ಮಾಡುತ್ತಿದ್ದಾರೆ. ಅವರು ಎಷ್ಟಾದರೂ ಪತ್ರ ಬರೆಯಲಿ ಬಿಡಿ. ನಾವು ನೋಡಿಕೊಳ್ಳುತ್ತೇವೆ ಎಂದರು.
ಬಿಜೆಪಿಯವರನ್ನು ನಾವು ಟರ್ಗೆಟ್ ಮಾಡುತ್ತಿಲ್ಲ. ಅವರು ರಾಜ್ಯಪಾಲರನ್ನು, ರಾಜ್ಯಪಾಲರ ಕಚೇರಿಯನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದರೆ ಅದನ್ನು ಸಿಎಂ ಹಾಗೂ ಸಚಿವ ಸಂಪುಟದಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಾಹಿತಿ ಸೋರಿಕೆ ರಾಜ್ಯಪಾಲರ ಕಚೇರಿಂದಲೇ ಆಗುತ್ತಿದೆ. ಬೇಕು ಅಂತಲೇ ಸೋರಿಕೆ ಮಾಡಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.