ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡ(SIT) ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.
ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆ ಪೋಲೀಸರು ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಿದ್ದು, ನಂತರ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ಪೊಲೀಸರು ಮುನಿರತ್ನ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರ ಮುನಿರತ್ನ ವಿರುದ್ಧ ವಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ. ಜೀವ ಬೆದರಿಕೆ, ಜಾತಿ ನಿಂದನೆ, ಕಗ್ಗಲಿಪುರ ಠಾಣೆಯ ಅತ್ಯಾಚಾರ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.