ಬೆಂಗಳೂರು: ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡದ ರೈತರ ಸಹಾಯಧನ ಕಡಿತ ಮಾಡುವ ಚಿಂತನೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಶೇಕಡ 95.4 ರಷ್ಟು ಕೃಷಿ ಪಂಪ್ ಸೆಟ್ ಗಳಿಗೆ ಈಗಾಗಲೇ ಆಧಾರ್ ಜೋಡಣೆ ಮಾಡಲಾಗಿದೆ. 34 ಲಕ್ಷದಲ್ಲಿ 32 ಲಕ್ಷ ಪಂಪ್ ಸೆಟ್ ಗಳಿಗೆ ಈಗಾಗಲೇ ಆಧಾರ್ ಜೋಡಣೆ ಆಗಿದೆ ಎಂದು ತಿಳಿಸಿದ್ದಾರೆ.
10 ಹೆಚ್.ಪಿ. ವರೆಗಿನ ಕೃಷಿ ಪಂಪ್ ಸೆಟ್ ಗಳ ಸ್ಥಾವರಗಳ ಆಧಾರ್ ಜೋಡಣೆಯನ್ನು ಸೆ. 24ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಹಾಯಧನ ತಡೆಹಿಡಿಯುವುದಾಗಿ ಇಂಧನ ಇಲಾಖೆ ಸೂಚನೆ ನೀಡಿತ್ತು. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಾರ್ಜ್, ರಾಜ್ಯದಲ್ಲಿರುವ 34 ಲಕ್ಷ ಕೃಷಿ ಪಂಪ್ ಸೆಟ್ ಗಳಲ್ಲಿ 32 ಲಕ್ಷ ಪಂಪ್ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಇದರಿಂದ ಅರ್ಹರಿಗೆ ಸಹಾಯಧನ ಹೋಗುತ್ತಿದೆಯೇ ಎನ್ನುವ ಮಾಹಿತಿ ಸಿಗುತ್ತದೆ. ಆಧಾರ್ ಜೋಡಣೆ ಮಾಡದವರಿಗೆ ಸಹಾಯಧನ ಕಡಿತ ಮಾಡುವ ಉದ್ದೇಶವಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಆದರೆ, ಆಧಾರ್ ಜೋಡಣೆಯ ಮೂಲಕ ದುರ್ಬಳಕೆ ತಡೆಯಬಹುದು. ಈ ಕುರಿತು ರೈತರಿಗೆ ಅರಿವು ಮೂಡಿಸಬೇಕಿದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಬೇಡವೆಂದು ಸಚಿವರು ಮನವಿ ಮಾಡಿದ್ದಾರೆ.