ಬೆಂಗಳೂರು: ಲೋಕಾಯುಕ್ತ ಪೊಲೀಸರು ಮತ್ತು ಉಪ ಲೋಕಾಯುಕ್ತರ ಸೋಗಿನಲ್ಲಿ ದುಷ್ಕರ್ಮಿಗಳು ಸರ್ಕಾರಿ ಅಧಿಕಾರಿಗಳಿಗೆ ಟ್ರ್ಯಾಪ್, ದಾಳಿಯ ಹೆಸರಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ತಾಲೂಕು ಪಂಚಾಯಿತಿ ಅಧಿಕಾರಿಯೊಬ್ಬರಿಗೆ ಲೋಕಾಯುಕ್ತ ಪೊಲೀಸರ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಲೋಕಾಯುಕ್ತ ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡ ಅಪರಿಚಿತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲೋಕಾಯುಕ್ತರ ಹೆಸರಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ನೌಕರರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಅಂತಹ ಕರೆ ಬಂದರೆ ತಕ್ಷಣವೇ ಗಮನಕ್ಕೆ ತರುವಂತೆ ಲೋಕಾಯುಕ್ತ ತಿಳಿಸಿದೆ. ಸರ್ಕಾರಿ ನೌಕರರಿಗೆ ಕರೆ ಮಾಡಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸದಿರಲು ಅಥವಾ ಪ್ರಕರಣ ರದ್ದುಪಡಿಸಲು ಹಣ ಕೊಡುವಂತೆ ಕೆಲವರು ಒತ್ತಾಯಿಸುತ್ತಿರುವ ಬಗ್ಗೆ ದೂರು ಬಂದಿದೆ. ಅಂತಹ ವಂಚಕರ ಕರೆ ಬಂದಲ್ಲಿ ದೂರು ನೀಡುವಂತೆ ಲೋಕಾಯುಕ್ತ ಮಾಹಿತಿ ನೀಡಿದೆ.