ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಮಾದರಿಯಲ್ಲಿಯೇ ಯುವತಿಯ ಬರ್ಬರ ಹತ್ಯೆ ನಡೆದಿದೆ. ವೈಯ್ಯಾಲಿ ಕಾವಲ್ ಪೈಪ್ ಲೈನ್ ರಸ್ತೆಯ ವೀರಣ್ಣ ಭವನದ ಬಳಿಯ ಮನೆಯಲ್ಲಿ ಈ ಘಟನೆ ನಡೆದಿದೆ.
26 ವರ್ಷದ ಮಹಾಲಕ್ಷ್ಮೀ ಕೊಲೆಯಾಗಿರುವ ಯುವತಿ. ಕೊಲೆ ಬಳಿಕ ಯುವತಿಯ ಮೃತದೇಹವನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಜ್ ನಲ್ಲಿರಿಸಿ ಫ್ರಿಜ್ ಆನ್ ಮಾಡಿಟ್ಟು ಹಂತಕ ಎಸ್ಕೇಪ್ ಆಗಿದ್ದಾನೆ.
ಎರಡು ದಿನಗಳಿಂದ ಮನೆಯಿಂದ ಅಕ್ಕಪಕ್ಕದ ಮನೆಯವರಿಗೆ ವಾಸನೆ ಬರುತ್ತಿತ್ತು. ಆದರೆ ಯಾವುದೋ ಪ್ರಾಣಿ ಸತ್ತಿರಬಹುದೆಂದು ಸುಮ್ಮನಾಗಿದ್ದರು. ಯುವತಿ ಫೋನ್ ಸ್ವಿಚ್ಡ್ ಆಫ್ ಆಗಿದೆ ಎಂದು ಇಂದು ಮನೆಬಳಿ ಯುವತಿಯ ತಾಯಿ-ಅಕ್ಕ ಬಂದು ನೋಡಿದ್ದಾರೆ. ಆದರೆ ಮನೆ ಲಾಕ್ ಆಗಿತ್ತು. ಮನೆ ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಫ್ರಿಜ್ ಬಾಗಿಲು ತೆರೆಯುತ್ತಿದ್ದಂತೆ ಮೃತದೇಹದಿಂದ ಹುಳಗಳು ಹೊರಬರುತ್ತಿದ್ದವು ಎನ್ನಲಾಗಿದೆ.
ಕೊಲೆಯಾಗಿರುವ ಯುವತಿ ಹೊರ ರಾಜ್ಯದವರಾಗಿದ್ದು, ಆದರೆ ಹಲವು ವರ್ಷಗಳಿಂದ ಕುಟುಂಬ ಬೆಂಗಳೂರಿನಲ್ಲಿಯೇ ವಾಸವಾಗಿದ್ದು, ಇಲ್ಲಿಯೇ ಸೆಟಲ್ ಆಗಿದ್ದರು. 5-6 ತಿಂಗಳ ಹಿಂದಷ್ಟೇ ಯುವತಿ ಮನೆಗೆ ಶಿಫ್ಟ್ ಆಗಿದ್ದಳು, ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿನ ಮಾಹಿತಿ ಪ್ರಕಾರ ಮೃತ ಮಹಾಲಕ್ಷ್ಮಿಗೆ ಮದುವೆಯಾಗಿ ಒಂದು ಮಗು ಕೂಡ ಇತ್ತು. ಆದರೆ ಪತಿಯಿಂದ ದೂರವಿದ್ದರು. ವೈಯ್ಯಾಲಿಕಾವಲ್ ಬಳಿಯ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯನ್ನು ಕೆಲದಿನಗಳ ಹಿಂದೆ ಕೊಲೆ ಮಾಡಿರುವ ಶಂಕೆ ಇದೆ. ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ.