ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೆ ಆರೋಪದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಆರ್.ಅಶೋಕ್, ತನಿಖೆ ಮಾಡಿ ಎಂದಿದ್ದಕ್ಕೆ ನನ್ನ ವಿರುದ್ಧವೇ ಕೇಸ್ ಹಾಕಲಾಗಿದೆ. ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ವಿಪಕ್ಷ ನಾಯಕನಾಗಿ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕಾ? ನಾನು ನಾಗಮಂಗಲಕ್ಕೆ ಭೇಟಿ ನೀಡಿದ್ದಾಗ ಜನರು ಹೇಳಿದ್ದನ್ನು ಟ್ವೀಟ್ ಮಾಡಿದ್ದೇನೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಎಂದರು. ಹಾಗಾದರೆ ನಿಮ್ಮ ವಿರುದ್ಧ ಯಾಕೆ ಎಫ್ ಐ ಆರ್ ದಾಖಲಿಸಬಾರದು? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದೆ. ರಾಜ್ಯಪಾಲರ ಮೇಲೂ ಕಾಂಗ್ರೆಸ್ ನವರು ಗದಾಪ್ರಹಾರ ನಡೆಸುತ್ತಿದ್ದಾರೆ. ವಿವಿಗಳಲ್ಲಿ ರಾಜ್ಯಪಾಲರ ಅಧಿಕಾರ ಕಸಿಯುವ ಯತ್ನ ನಡೆಸಲಾಗುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ನಾನು ಇಂದಿರಾ ಗಾಂಧಿ ವಿರುದ್ಧವೇ ಹೋರಾಟ ಮಾಡಿ ಬಂದವನು. ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಕಿಡಿಕಾರಿದ್ದಾರೆ.