
ಚಿಕ್ಕಮಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಗೀರ್ ಅಹಮ್ಮದ್ ಕುಟುಂಬಕ್ಕೆ ಸೇರಿದ 31 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಸಗೀರ್ ಅಹ್ಮದ್ ಕುಟುಂಬಕ್ಕೆ ಭೂ ವ್ಯಾಜ್ಯದಲ್ಲಿ ಭಾರಿ ಹಿನ್ನಡೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಗ್ರಾಮದಲ್ಲಿ ಸಗೀರ್ ಅಹಮದ್ ಅವರ ಪತ್ನಿ ಹೆಸರಲ್ಲಿ ಐದು ಸರ್ವೇ ನಂಬರ್ ಗಳ ವ್ಯಾಪ್ತಿಯಲ್ಲಿದ್ದ ಒಟ್ಟು 31.31 ಎಕರೆ ಜಾಗವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ಈ ಜಾಗದಲ್ಲಿರುವ ಬಂಡಿದಾರಿ, ಕಾಲುದಾರಿ, ಜಲಪಾತ ರಸ್ತೆಗಳ ಮೇಲೆ ಅವರಿಗೆ ಹಕ್ಕು, ಮಾಲೀಕತ್ವ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೂಲತಃ ಹಿಂದೂ ಮುಸ್ಲಿಂ ಭಾವೈಕ್ಯತೆ ಕೇಂದ್ರವಾದ ಇನಾಂ ದತ್ತಾತ್ರೇಯ ಪೀಠ ಮತ್ತು ಬಾಬಾ ದರ್ಗಾದ ಧಾರ್ಮಿಕ ಸಂಸ್ಥೆಗಳಿಗೆ ಈ ಜಾಗ ಸೇರಿದ್ದಾಗಿತ್ತು. ಈ ಸಂಸ್ಥೆಯ ವಹಿವಾಟುದಾರರಾಗಿದ್ದ ಸಜ್ಮದ್ ಎಂಬುವರು ವಾಸಿಮಲ್ ಅವರಿಗೆ ದೇಣಿಗೆ ನೀಡಿದ್ದರು. 1955 ರಲ್ಲಿ ಜಾರಿಗೆ ಬಂದ ಕರ್ನಾಟಕ ರಿಲಿಜಿಯಸ್ ಅಂಡ್ ಚಾರಿಟಬಲ್ ಇನಾಂ ಅಬಾಲಿಷನ್ ಕಾಯ್ದೆ ಪ್ರಕಾರ ಅಷ್ಟು ಜಾಗ ಸರ್ಕಾರಕ್ಕೆ ಸೇರ್ಪಡೆಯಾಗಿತ್ತು. ನಂತರ ಇನಾಂ ದತ್ತಾತ್ರೇಯ ಪೀಠ ಮತ್ತು ಬಾಬಾ ದರ್ಗಾದ ಧಾರ್ಮಿಕ ಸಂಸ್ಥೆಗೆ 11.60 ಲಕ್ಷ ರೂ. ತಸ್ತಿಕ್ ನಿಗದಿ ಮಾಡಲಾಗಿತ್ತು. 1978 ರಲ್ಲಿ ಮಾಜಿ ಸಚಿವ ಸಗೀರ್ ಅಹ್ಮದ್ ಪತ್ನಿ ಫಾತಿಮಾಬೀ ಇದನ್ನು ಖರೀದಿಸಿದ್ದರು.