ಹುಬ್ಬಳ್ಳಿ: ಈರುಳ್ಳಿ ಹಂಗಾಮು ಆರಂಭವಾಗಿದ್ದು, ಸದ್ಯಕ್ಕೆ ಬೆಲೆ ಹೆಚ್ಚಳದ ಬಿಸಿ ಕಡಿಮೆಯಾಗಲಿದೆ. ಆವಕ ಹೆಚ್ಚಾದಲ್ಲಿ ಈರುಳ್ಳಿ ದರ ಕಡಿಮೆಯಾಗಲಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಈ ಬಾರಿ ಈರುಳ್ಳಿ ಬೆಳೆ ನಾಶವಾಗಿದ್ದು, ರಾಜ್ಯದಲ್ಲಿಯೂ ಈರುಳ್ಳಿ ಬೆಳೆ ಹಾನಿಯಾಗಿತ್ತು. ಇನ್ನು ದೊಡ್ಡ ವರ್ತಕರು ದಾಸ್ತಾನು ಮಾಡಿದ ಕಾರಣ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಾರದೆ ದರ ಏರಿಕೆಯಾಗಿದೆ. ಈಗಾಗಲೇ ಕೆಜಿಗೆ 60 ರೂಪಾಯಿ ದಾಟಿರುವ ಈರುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಆತಂಕದಲ್ಲಿ ಗ್ರಾಹಕರಿದ್ದರು.
ಇದೀಗ ಈರುಳ್ಳಿ ಹಂಗಾಮ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಲಭ್ಯವಾಗಲಿದ್ದು ಬೆಲೆ ಕೂಡ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಹುಬ್ಬಳ್ಳಿ ಎಪಿಎಂಸಿಗೆ ಸ್ಥಳೀಯ ಈರುಳ್ಳಿ ಆವಕ ಹೆಚ್ಚಳವಾಗಿದ್ದು, ಬೆಲೆ ಏರಿಕೆ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ. ಹುಬ್ಬಳ್ಳಿ ಎಪಿಎಂಸಿಗೆ ಸೆಪ್ಟೆಂಬರ್ 6ರವರೆಗೆ ನೂರು ಕ್ವಿಂಟಲ್ ಲೆಕ್ಕದಲ್ಲಿ ಬರುತ್ತಿದ್ದ ಈರುಳ್ಳಿ ಈಗ 2000ಕ್ಕೂ ಅಧಿಕ ಕ್ವಿಂಟಲ್ ಬರುತ್ತಿದೆ. ಆವಕ ಹೆಚ್ಚಾಗುತ್ತಿದ್ದಂತೆ ಗುಣಮಟ್ಟದ ಈರುಳ್ಳಿ ದರ 3000 ರೂ.ನಿಂದ 4,200 ರೂ.ವರೆಗೂ ಮಾರಾಟವಾಗುತ್ತಿದೆ. ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಲೆ ಕಡಿಮೆಯಾಗಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.