ಪೊಲೀಸ್ ಅಂಕಲ್, ಪೊಲೀಸ್ ಅಂಕಲ್… ನಮ್ಮಪ್ಪ ಕೊಳಕು. ಅವರು ನನ್ನ ಮೇಲೆ ಕೊಳಕು ಕೆಲಸಗಳನ್ನು ಮಾಡುತ್ತಾರೆ… ಹೀಗೆ ಹೇಳುತ್ತಾ, 9 ವರ್ಷದ ಹುಡುಗಿ ಜೋರಾಗಿ ಅಳಲು ಪ್ರಾರಂಭಿಸಿದಾಗ ಆಕೆಯ ಮಾತು ಕೇಳಿ ಠಾಣೆಯಲ್ಲಿದ್ದ ಪೊಲೀಸರೆಲ್ಲ ದಿಗ್ಭ್ರಮೆಗೊಂಡರು. ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ? ತಂದೆ- ಮಗಳ ಬಾಂಧವ್ಯಕ್ಕೆ ಯಾವ ಅರ್ಥವಿದೆ ಎಂಬುದನ್ನ ಚಿಂತಿಸುವಂತೆ ಮಾಡುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಹುಡುಗಿ ತನ್ನ ತಂದೆ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದು, ಬಾಲಕಿಯ ನರಳಾಟವನ್ನು ಕೇಳಿದ ಪೊಲೀಸ್ ಅಧಿಕಾರಿ ಆರೋಪಿ ತಂದೆಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಬಾಲಕಿಯನ್ನು ಆಶಾಜ್ಯೋತಿ ಕೇಂದ್ರಕ್ಕೆ ದಾಖಲಿಸಲಾಗಿದೆ.
ಈ ಪ್ರಕರಣ ಉತ್ತರ ಪ್ರದೇಶದ ಮೀರತ್‌ನಲ್ಲಿ ಬೆಳಕಿಗೆ ಬಂದಿದೆ. ತನ್ನ ಚಿಕ್ಕಪ್ಪನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ ಬಾಲಕಿ ತನ್ನ ತಂದೆ ನಡೆಸಿದ ನಾಚಿಕೆಗೇಡಿನ ಸಂಗತಿಯನ್ನು ತನ್ನ ತೊದಲು ಭಾಷೆಯಲ್ಲೇ ನುಡಿದಳು.
ಪಪ್ಪ ನನ್ನೊಂದಿಗೆ ಕೊಳಕು ಕೆಲಸಗಳನ್ನು ಮಾಡುತ್ತಾರೆ. ನಾನು ಪ್ರತಿಭಟಿಸಿದರೆ ಅವರು ನನ್ನನ್ನು ಹೊಡೆಯುತ್ತಾರೆ ಎಂದು ಹೇಳುತ್ತಾ ಬಾಲಕಿ ಅಳಲು ತೋಡಿಕೊಂಡಳು. ಬಳಿಕ ಆಕೆಯೊಂದಿಗೆ ಬಂದಿದ್ದ ಚಿಕ್ಕಪ್ಪ ಪೊಲೀಸರಿಗೆ ಘಟನೆಯನ್ನು ವಿವರಿಸಿದರು. ನನ್ನ ತಂಗಿ ಬಹಳ ಹಿಂದೆಯೇ ತೀರಿಕೊಂಡಿದ್ದಾಳೆ. ಈ ಹುಡುಗಿ ತನ್ನ ತಂಗಿಯ ಮಗಳಾಗಿದ್ದು ತನ್ನ ತಂದೆಯೊಂದಿಗೆ ವಾಸಿಸುತ್ತಾಳೆ. ಈ ಹುಡುಗಿಗೆ ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿ ಇದ್ದಾರೆ. ಒಬ್ಬಳು ತನ್ನೊಂದಿಗೆ ವಾಸಿಸುತ್ತಿದ್ದು ಈಕೆ ತನ್ನ ತಂದೆ ಮತ್ತು ಇಬ್ಬರು ಸಹೋದರರೊಂದಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಆದರೆ ಮನೆಯಲ್ಲಿ ತಂದೆ ಕಿರುಕುಳ ನೀಡುತ್ತಾನೆ, ಅವಳೊಂದಿಗೆ ಅಸಭ್ಯ ಕೆಲಸಗಳನ್ನು ಮಾಡುತ್ತಾನೆ. ಅಷ್ಟೇ ಅಲ್ಲ ಹುಡುಗಿಯನ್ನು ಕೆಟ್ಟದಾಗಿ ಥಳಿಸುತ್ತಾನೆ ಎಂದಿದ್ದಾರೆ.
ಹುಡುಗಿ ಪೊಲೀಸ್ ಅಧಿಕಾರಿಯೊಂದಿಗೆ ವಿವರಿಸುತ್ತಾ, ನಾನು ನನ್ನ ತಂದೆಯೊಂದಿಗೆ ವಾಸಿಸಲು ಬಯಸುವುದಿಲ್ಲ. ಅವರಿಗೆ ಜೈಲಿಗೆ ಕಳಿಸಿ ಎಂದಳು. ಬಳಿಕ ಹುಡುಗಿಯ ಚಿಕ್ಕಪ್ಪ ಮಾತನಾಡಿ ನಾವು ಈಕೆಯನ್ನು ಭೇಟಿಯಾಗಲು ಹೋದಾಗ ಈ ಬಗ್ಗೆ ನಮಗೆ ತಿಳಿಯಿತು. ಅದಕ್ಕೇ ಅವಳನ್ನು ಠಾಣೆಗೆ ಕರೆದುಕೊಂಡು ಬಂದೆವು ಎಂದರು. ಬಾಲಕಿ ಹಾಗೂ ಆಕೆಯ ಚಿಕ್ಕಪ್ಪನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ಸದ್ಯ ಆರೋಪಿ ತಂದೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆಶಾಜ್ಯೋತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ನಾವು ವಿಷಯವನ್ನು ಗಂಭೀರವಾಗಿ ತನಿಖೆ ಮಾಡುತ್ತಿದ್ದು ತಪ್ಪಿತಸ್ಥರೆಂದು ಕಂಡುಬಂದರೆ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.