ಬೆಂಗಳೂರು: ರಾಜ್ಯದಲ್ಲಿ ಅನರ್ಹರು ಪಡೆದುಕೊಂಡಿರುವ ಸುಮಾರು 20 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಅನರ್ಹರ ಪತ್ತೆ ಹಚ್ಚಲು ಖಾಸಗಿ ಸಂಸ್ಥೆಗೆ ಸಮೀಕ್ಷೆ ಹೊಣೆ ನೀಡಲಾಗಿದೆ ಎನ್ನಲಾಗಿದೆ. ಅನ್ನಭಾಗ್ಯ ಯೋಜನೆಯ ಅನಗತ್ಯ ವೆಚ್ಚ ಉಳಿಸಲು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಪ್ಲಾನ್ ಮಾಡಿದ್ದಾರೆ. ಆಹಾರ ಭದ್ರತೆ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ 1.03 ಕೋಟಿ ಬಿಪಿಎಲ್ ಕಾರ್ಡ್ ಗಳು ಇರಬೇಕು. ಆದರೆ, 1.16 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡುಗಳನ್ನು ವಿತರಿಸಲಾಗಿದೆ.
ಸುಮಾರು 14 ಲಕ್ಷ ಹೆಚ್ಚುವರಿ ಕಾರ್ಡ್ ಗಳಿದ್ದು, ಅವುಗಳನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಈಗ 20 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಅನ್ನಭಾಗ್ಯ ಯೋಜನೆಯಡಿ ಅನಗತ್ಯವಾಗಿ ಖರ್ಚಾಗುತ್ತಿರುವ ಹಣ ಉಳಿಸಲು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅಂತಹವರ ಕಾರ್ಡ್ ಗಳನ್ನು ರದ್ದು ಮಾಡಲಾಗುವುದು. ಅವರಿಗೆ ಎಪಿಎಲ್ ಕಾರ್ಡ್ ನೀಡಲಾಗುವುದು. ಈ ಕುರಿತು ಸಮೀಕ್ಷೆ ನಡೆಸಲು ಖಾಸಗಿ ಕಂಪನಿಗೆ ಜವಾಬ್ದಾರಿ ವಹಿಸಿದೆ ಎಂದು ಹೇಳಲಾಗಿದೆ.