ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಾಯುಪಡೆ ನಿಲ್ದಾಣದ ವಿಂಗ್ ಕಮಾಂಡರ್ ವಿರುದ್ಧ ಅತ್ಯಾಚಾರ, ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಭಾರತೀಯ ವಾಯುಪಡೆಯ(ಐಎಎಫ್) ಮಹಿಳಾ ಫ್ಲೈಯಿಂಗ್ ಆಫೀಸರ್ ದೂರು ನೀಡಿದ್ದಾರೆ. ಆರೋಪ ಬೆಳಕಿಗೆ ಬಂದ ನಂತರ IAF ಪ್ರಕರಣದ ಆಂತರಿಕ ತನಿಖೆಗೆ ಆದೇಶಿಸಿದೆ.
ಶ್ರೀನಗರದ ವಾಯುಪಡೆಯ ವಿಂಗ್ ಕಮಾಂಡರ್ ಅತ್ಯಾಚಾರ, ಮಾನಸಿಕ ಕಿರುಕುಳ ಮತ್ತು ನಿರಂತರ ಹಿಂಬಾಲಿಸಿದ್ದಾಗಿ ಮಹಿಳಾ ಫ್ಲೈಯಿಂಗ್ ಆಫೀಸರ್ ದೂರು ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸಿದ್ದಾರೆ.
ವಿಂಗ್ ಕಮಾಂಡರ್ ವಿರುದ್ಧ ಬದ್ಗಾಮ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಶ್ರೀನಗರದ ವಾಯುಪಡೆ ನಿಲ್ದಾಣದಲ್ಲಿ ಹಿರಿಯ ಅಧಿಕಾರಿ ವಿರುದ್ಧ ಮಹಿಳಾ ಅಧಿಕಾರಿ ಗಂಭೀರ ಆರೋಪ ಮಾಡಿರುವ ದೂರಿನ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
ಈ ಘಟನೆಯು ಡಿಸೆಂಬರ್ 31, 2023 ರ ರಾತ್ರಿ ಅಧಿಕಾರಿಗಳ ಮೆಸ್‌ನಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ನಡೆದಿದೆ. ವಿಂಗ್ ಕಮಾಂಡರ್ ತನ್ನ ಕೋಣೆಯಲ್ಲಿ ಉಡುಗೊರೆ ಸಂಗ್ರಹಿಸಲು ಹೇಳಿ ನಂತರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ಬದ್ಗಾಮ್ ಪೊಲೀಸ್ ಠಾಣೆಯು ತನಿಖೆಗಾಗಿ ಸಂಬಂಧಪಟ್ಟ ವಾಯುಪಡೆಯ ಠಾಣೆಯನ್ನು ಸಂಪರ್ಕಿಸಿದೆ ಮತ್ತು ಅದು ತನಿಖೆಯಲ್ಲಿ ಸಹಕರಿಸುತ್ತಿದೆ ಎಂದು ಐಎಎಫ್ ತಿಳಿಸಿದೆ.