ಬೆಂಗಳೂರು: ರಾಜ್ಯದ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಪ್ರತಿ ಸ್ವತ್ತುಗಳ ಆಸ್ತಿ ದಾಖಲೆಗಳನ್ನು ನಿಖರವಾಗಿ ಇಡಲು ಕೇಂದ್ರ ಸರ್ಕಾರದ ಡಿಜಟಲೀಕರಣ ಯೋಜನೆ ಜಾರಿಗೆ ಮುಂದಾಗಿದೆ. ಡಿಜಿಟಲ್ ಇಂಡಿಯಾ ಯೋಜನೆ ಮುಂದುವರೆದ ಭಾಗವಾಗಿ ಡ್ರೋನ್ ಮೂಲಕ ದೇಶದ ಎಲ್ಲಾ ಆಸ್ತಿಗಳ ಡಿಜಿಟಲೀಕರಣ ನಡೆಸುವ ನಿರ್ಧಾರವನ್ನು ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದೆ.
ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರದ ಯೋಜನೆಯ ಸಮರ್ಥ ಬಳಕೆಗೆ ಮುಂದಾಗಿದೆ. ರಾಜ್ಯ ಹಣ ವೆಚ್ಚ ಮಾಡಿದ್ದಲ್ಲಿ ನಂತರ ಕೇಂದ್ರ ಸರ್ಕಾರ ಭರಿಸಲಿದೆ. ಇದಕ್ಕಾಗಿ ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕೃಷಿ, ಸರ್ವೆ, ಹಣಕಾಸು ಇಲಾಖೆಗಳ ನಿರಂತರ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆಸ್ತಿ ಸಂಬಂಧಿತ ಮಾಹಿತಿ ಸಂಗ್ರಹ, ರೈತರ ಆಧಾರ್ ಜೋಡಣೆ, ಅಕ್ಷಾಂಶ -ರೇಖಾಂಶಕ್ಕೆ ತಕ್ಕಂತೆ ನಕ್ಷೆ, ಮ್ಯಾಪ್ ರೂಪಿಸುತ್ತಿರುವ ಸರ್ಕಾರ ಕೈಗೆಟುಕುವಂತೆ ಆರ್.ಟಿ.ಸಿ. ವ್ಯವಸ್ಥೆ, ಹೀಗೆ ಅನೇಕ ಕ್ರಮ ಕೈಗೊಂಡಿದೆ. ಇದರಿಂದಾಗಿ ನೋಂದಣಿ ಅಕ್ರಮಕ್ಕೆ ತಡೆ ಬೀಳಲಿದ್ದು, ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ.
ಸಮೀಕ್ಷೆಗೆ ತಕ್ಕಂತೆ ನಕ್ಷೆ ಸಿದ್ಧವಾಗಿರಲಿದ್ದು, ಏಕೀಕೃತ ಭೂ ನಿರ್ವಹಣೆ ಸಾಧ್ಯವಾಗಲಿದೆ. ಅಕ್ರಮಗಳಿಗೆ ಕಡಿವಾಣ ಬೀಳಲಿದ್ದು, ಭೂ ಮಾಲೀಕರಿಗೆ ಅನುಕೂಲವಾಗುತ್ತದೆ. ಪ್ರತಿ ವ್ಯಕ್ತಿಗೆ ಆಧಾರ್ ಸಂಖ್ಯೆ ನೀಡಿರುವಂತೆ ಈ ಯೋಜನೆಯಡಿ ಭೂಮಿಗೆ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆ ಭೂ ಆಧಾರ್ ನೀಡಲಾಗುವುದು. ಈ ಮೂಲಕ ಭೂಮಿಯ ನಿಖರ ಸಮಗ್ರ ದಾಖಲೆ ಸೃಷ್ಟಿಯಾಗಲಿದ್ದು, ಅದನ್ನು ರೈತರ ರಿಜಿಸ್ಟ್ರಿಯೊಂದಿಗೆ ಜೋಡಣೆ ಮಾಡಲಾಗುವುದು ಎಂದು ಹೇಳಲಾಗಿದೆ.