ಶಿವಮೊಗ್ಗ: ಪರೀಕ್ಷಾ ಫಲಿತಾಂಶ ವಿಳಂಬ ಆರೋಪ ಹೊತ್ತಿದ್ದ ಕುವೆಂಪು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಬಿ.ಇಡಿ ಮೊದಲ ಮತ್ತು ಮೂರನೇ ಸೆಮಿಸ್ಟರ್ ಫಲಿತಾಂಶವನ್ನು ಮೌಲ್ಯಮಾಪನ ಮುಗಿದ ಅರ್ಧ ಗಂಟೆಯಲ್ಲಿ ಪ್ರಕಟಿಸಿದೆ. ಈ ಮೂಲಕ ಫಲಿತಾಂಶ ವಿಳಂಬ ಕಳಂಕ ತೊಡೆಯುವಲ್ಲಿ ಯಶಸ್ವಿಯಾಗಿದೆ.
ಬಿ.ಇಡಿ ಮೊದಲ ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆ ಆಗಸ್ಟ್ 12 ರಿಂದ 26ರ ವರೆಗೆ ನಡೆದಿತ್ತು. ಸೆಪ್ಟೆಂಬರ್ 9 ರಂದು ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಅರ್ಧ ಗಂಟೆಯಲ್ಲಿ 18 ಕಾಲೇಜುಗಳ 2572 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. ಪರೀಕ್ಷೆ ಮುಗಿದ 14 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿರುವುದಾಗಿ ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಕುಲ ಸಚಿವ ಎಸ್.ಎಂ. ಗೋಪಿನಾಥ್ ಮಾಹಿತಿ ನೀಡಿದ್ದಾರೆ.
ಫಲಿತಾಂಶದಲ್ಲಿ ಆಗುತ್ತಿದ್ದ ಲೋಪ ಸರಿಪಡಿಸಿಕೊಂಡು ವಿವಿಗೆ ಆಗುತ್ತಿದ್ದ ಆರ್ಥಿಕ ನಷ್ಟ ತೊಡೆದು ಹಾಕಲು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷಾ ಫಲಿತಾಂಶವನ್ನು ಇದೇ ರೀತಿ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.