ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ನೀಡುವ ಸಬ್ಸಿಡಿಯನ್ನು ಒಂದೆರಡು ತಿಂಗಳ ಕಾಲ ಮುಂದುವರಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ವಾಹನಗಳ ಬಿಡಿಭಾಗಗಳ ಉತ್ಪಾದಕರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಸಬ್ಸಿಡಿ ಬಗ್ಗೆ ವಾಹನ ಮಾರಾಟಗಾರರು, ಗ್ರಾಹಕರು ಆತಂಕಪಡಬಾರದು ಎಂದು ಹೇಳಿದ್ದಾರೆ.
ಈ ತಿಂಗಳು ಅಂತ್ಯಗೊಳ್ಳಬೇಕಿದ್ದ ಸಬ್ಸಿಡಿ ಯೋಜನೆ ಮುಂದುವರೆಯಲಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟಗಾರರು ಹಾಗೂ ಗ್ರಾಹಕರು ನಿರಾಣರಾಗಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್, ಆಟೋ, ವಾಣಿಜ್ಯ ಆಟೋಗಳಿಗೆ ಕೇಂದ್ರ ಸರ್ಕಾರ ಕ್ರಮವಾಗಿ 10,000 ರೂ., 25000 ರೂ. ಹಾಗೂ 50,000 ರೂ. ಸಬ್ಸಿಡಿ ನೀಡುತ್ತದೆ.
ಇದಕ್ಕಾಗಿ ಇ.ಎಂ.ಪಿ.ಎಸ್. ಯೋಜನೆ ಜಾರಿಯಲ್ಲಿದ್ದು, ಸೆಪ್ಟೆಂಬರ್ 30ಕ್ಕೆ ಅಂತ್ಯವಾಗಬೇಕಿತ್ತು, ಆದರೆ, ಅದನ್ನು ಫೇಮ್ 3 ಯೋಜನೆಯ ಅಂತಿಮಗೊಂಡು ಜಾರಿಯಾಗುವವರೆಗೆ ಮುಂದುವರಿಸಲಾಗುವುದು. ಬಹುತೇಕ ಒಂದೆರಡು ತಿಂಗಳ ಕಾಲ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಯೋಜನೆ ಮುಂದುವರೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.