ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಜಗಳ ಉಂಟಾಗಿ ಈ ವೇಳೆ ಬಾಮೈದನೇ ಚಾಕುವಿನಿಂದ ಬಾವನಿಗೆ ಇರಿದು ಕೊಲೆ ಮಾಡಿದ್ದಾನೆ.
ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಸಗುಡ್ಡದಹಳ್ಳಿ ನಿವಾಸಿ ವೆಂಕಟಾಚಲಪತಿ(43) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ವಿಶ್ವನಾಥನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಾವ ವೆಂಕಟಾಚಲಪತಿ ಮನೆ ಬಳಿಗೆ ಬಂದಿದ್ದ ವಿಶ್ವನಾಥ ಕೌಟುಂಬಿಕ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ವಿಶ್ವನಾಥ ಏಕಾಏಕಿ ಚಾಕುವಿನಿಂದ ವೆಂಕಟಾಚಲಪತಿಗೆ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.