ಶ್ರಾವಣ ಮಾಸ, ಗಣಪತಿ ಹಬ್ಬ ಮುಗಿಯುತಿದ್ದಂತೆ ಮಾಂಸದ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಭಾನುವಾರದ ಬಾಡೂಟಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
ಬಹುತೇಕರು ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವುದಿಲ್ಲ. ಕಳೆದ ಭಾನುವಾರವೇ ಶ್ರಾವಣ ಮುಗಿದಿದೆ. ಸೋಮವಾರ ಅಮಾವಾಸ್ಯೆ. ಶುಕ್ರವಾರ ಗೌರಿ ಹಬ್ಬ, ಶನಿವಾರ ಗಣಪತಿ ಹಬ್ಬ ಮುಗಿದಿದ್ದು, ಇಂದು ಭಾನುವಾರವಾಗಿರುವುದರಿಂದ ಬಹುತೇಕರು ಮಾಂಸದ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಶ್ರಾವಣ ಮಾಸ ಮುಗಿದರೂ ಮಾಂಸಹಾರ ಸೇವಿಸದ ಬಹುತೇಕರು ಗೌರಿ, ಗಣಪತಿ ಹಬ್ಬ ಮುಗಿಯುವವರೆಗೂ ಕಾಯುತ್ತಾರೆ. ಇದೀಗ ಹಬ್ಬ ಮುಗಿದಿರುವುದರಿಂದ ಹೆಚ್ಚಿನವರ ಮನೆಗಳಲ್ಲಿ ಮಾಂಸದ ಅಡುಗೆ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಭಾನುವಾರ ಬೆಳ್ಳಂಬೆಳಗ್ಗೆ ಮೀನು, ಕುರಿ, ಕೋಳಿ ಮಾಂಸದ ಅಂಗಡಿಗಳ ಬಳಿ ಜನ ಜಾತ್ರೆಯೇ ನೆರೆದಿದೆ.
ವಿವಿಧೆಡೆ ಮೀನು ಮಾರುಕಟ್ಟೆ, ಮಾಂಸ, ಕೋಳಿ ಅಂಗಡಿಗಳ ಬಳಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ. ಹೆಚ್ಚಿನ ಜನ ಖರೀದಿಗೆ ಬಂದಿದ್ದರಿಂದ ಕೆಲವು ಕಡೆ ಚಿಕನ್, ಮಾಂಸದ ದರ ಹೆಚ್ಚಾಗಿದೆ.