ಬೆಂಗಳೂರು: ಅನಧಿಕೃತ ಬಡಾವಣೆಗಳ ನಿವೇಶನ ನೋಂದಣಿ ತಡೆಗೆ ಕಾವೇರಿ -2 ತಂತ್ರಾಂಶಕ್ಕೆ ಇ- ಆಸ್ತಿ ತಂತ್ರಾಂಶ ಜೋಡಣೆ ಮಾಡಲಾಗಿದ್ದು, ಇನ್ನು ಕ್ರಮಬದ್ಧ ದಾಖಲೆಗಳಿದ್ದರಷ್ಟೇ ಮಾತ್ರ ಸ್ಥಿರಾಸ್ತಿ ನೋಂದಣಿಯಾಗಲಿದೆ. ನಗರ ಪ್ರದೇಶದ ಅನಧಿಕೃತ ಬಡಾವಣೆಗೆ ಬ್ರೇಕ್ ಹಾಕಲು ಸೆಪ್ಟೆಂಬರ್ 9 ರಿಂದ ನಾಲ್ಕು ಕಡೆ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸ್ಥಿರಾಸ್ತಿಗಳ ನೋಂದಣಿಗೆ ಕಾವೇರಿ-2, ಇ- ಆಸ್ತಿ ತಂತ್ರಾಂಶ ಜೋಡಣೆಯಾಗಿದ್ದು, ಸೆಪ್ಟೆಂಬರ್ 9 ರಿಂದ 4 ಜಿಲ್ಲೆಗಳಲ್ಲಿ ಇ- ಆಸ್ತಿ ಮಾಹಿತಿ ಆಧರಿಸಿ ಸ್ಥಿರಾಸ್ತಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರ ಸಾಧಕ ಬಾಧಕ ಪರಿಶೀಲಿಸಿ ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ವ್ಯವಸ್ಥೆ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಚಿಂತನೆ ನಡೆಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಆಗದಿರುವುದು, ನಕ್ಷೆ ಮಂಜೂರಾತಿ ಇಲ್ಲದಿರುವುದು ಸೇರಿ ಕ್ರಮಬದ್ಧ ದಾಖಲೆಗಳಿಲ್ಲದ ಆಸ್ತಿಗಳನ್ನು ಅಕ್ರಮವಾಗಿ ನೋಂದಣಿ ಮಾಡಲಾಗುತ್ತಿತ್ತು. ಕಾವೇರಿ ತಂತ್ರಾಂಶದಲ್ಲಿ ಸ್ವತ್ತಿನ ಸ್ವರೂಪವನ್ನು ಇತರೆ ಎಂದು ಆಯ್ಕೆ ಮಾಡಿ ಕೆಲವು ಕಚೇರಿಗಳಲ್ಲಿ ಕ್ರಮಬದ್ಧವಾಗಿಲ್ಲದ ಸ್ವತ್ತುಗಳು ನೋಂದಣಿಯಾಗುತ್ತಿವೆ.
ಆಸ್ತಿಗೆ ಸಂಬಂಧಿಸಿದಂತೆ ನಮೂನೆ 3 ಆಧರಿಸಿ ಒಂದೇ ಸ್ಥಿರಾಸ್ತಿಯನ್ನು ಅನೇಕರಿಗೆ ನೋಂದಣಿ ಮಾಡಿಕೊಟ್ಟು ವಂಚಿಸಲಾಗುತ್ತಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ-2, ಇ- ಆಸ್ತಿ ತಂತ್ರಾಂಶ ಜೋಡಣೆಗೆ ಮುಂದಾಗಿದೆ. ಇ- ಖಾತೆಯಲ್ಲಿ ಮಾತ್ರ ಸ್ವತ್ತಿನ ಪಿಐಡಿ ಸಂಖ್ಯೆ ಲಭ್ಯವಾಗುತ್ತದೆ. ಕಾವೇರಿ -2 ತಂತ್ರಾಂಶದಲ್ಲಿ ಕೃಷಿಯೇತರ ಸ್ವತ್ತುಗಳಿಗೆ ಕಡ್ಡಾಯವಾಗಿ ಇ- ಸ್ವತ್ತು ಅಥವಾ ಇ- ಆಸ್ತಿ ತಂತ್ರಾಂಶಗಳಿಂದ ಮಾಹಿತಿ ಪಡೆದು ನೋಂದಣಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದಾಗಿ ಒಂದೇ ಆಸ್ತಿಯನ್ನು ಹಲವರಿಗೆ ನೋಂದಣಿ ಮಾಡುವುದಕ್ಕೆ ಕಡಿವಾಳ ಬೀಳಲಿದೆ. ಆತಂಕವಿಲ್ಲದೆ ಸೂಕ್ತ ದಾಖಲೆ ಇರುವ ಆಸ್ತಿ ಖರೀದಿಸಬಹುದಾಗಿದೆ.