ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಶುಕ್ರವಾರ ಕಾಂಗ್ರೆಸ್ ಸೇರುವ ಕೆಲವೇ ಗಂಟೆಗಳ ಮೊದಲು ಉತ್ತರ ರೈಲ್ವೇಸ್ ನಲ್ಲಿನ ತಮ್ಮ ಹುದ್ದೆ ತೊರೆದಿದ್ದಾರೆ. ಆದರೆ ಅವರ ರಾಜೀನಾಮೆಗಳನ್ನು ಇನ್ನೂ ಅಂಗೀಕರಿಸಲಾಗಿಲ್ಲ ಎಂದು ರೈಲ್ವೆಯ ಮೂಲಗಳು ತಿಳಿಸಿವೆ.
ರಾಜೀನಾಮೆಗಳನ್ನು ಅಂಗೀಕರಿಸಲಾಗುವುದಿಲ್ಲ ಎಂದು ಹೇಳದಿದ್ದರೂ, ಫೋಗಟ್ ಮತ್ತು ಪುನಿಯಾ ಯಾವುದೇ ಪಕ್ಷಕ್ಕೆ ಸೇರಲು ಅಥವಾ ಅದು ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಔಪಚಾರಿಕವಾಗಿ ಕಾಂಗ್ರೆಸ್‌ಗೆ ಸೇರುವ ಮೊದಲು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಉತ್ತರ ರೈಲ್ವೇಸ್‌ನ ವಿಶೇಷ ಕರ್ತವ್ಯ(OSD) ಕ್ರೀಡಾ ಅಧಿಕಾರಿಯಾಗಿದ್ದ ಫೋಗಟ್ ರಾಜೀನಾಮೆ ನೀಡಿದ್ದಾರೆ.
ತನ್ನ ರಾಜೀನಾಮೆ ಪತ್ರವನ್ನು ಹಂಚಿಕೊಂಡ ಅವರು ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದಲ್ಲಿ ಸ್ಮರಣೀಯ ಮತ್ತು ಹೆಮ್ಮೆಯ ಸಮಯವಾಗಿದೆ. ನನ್ನ ಜೀವನದಲ್ಲಿ ಈ ಸಮಯದಲ್ಲಿ, ನಾನು ನನ್ನ ರೈಲ್ವೆ ಸೇವೆಯಿಂದ ನನ್ನನ್ನು ಪ್ರತ್ಯೇಕಿಸಲು ನಿರ್ಧರಿಸಿದ್ದೇನೆ. ನನ್ನ ರಾಜೀನಾಮೆಯನ್ನು ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ, ದೇಶದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಭಾರತೀಯ ರೈಲ್ವೆ ಕುಟುಂಬಕ್ಕೆ ಯಾವಾಗಲೂ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಪುನಿಯಾ ಅವರು ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ತಮ್ಮ ರಾಜೀನಾಮೆಯನ್ನು ರೈಲ್ವೆ ಅನುಮೋದಿಸದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡಿದ್ದಾರೆ. ಸೇವಾ ನಿಯಮಗಳ ಪ್ರಕಾರ, ರಾಜೀನಾಮೆಗಳನ್ನು ರೈಲ್ವೆ ಅನುಮೋದಿಸುವವರೆಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಯಾವುದೇ ಪಕ್ಷಕ್ಕೆ ಸೇರುವಂತಿಲ್ಲ ಎಂದು ಹೇಳಲಾಗಿದೆ.
ಕುಸ್ತಿಪಟುಗಳ ಸೇರ್ಪಡೆಯನ್ನು ಘೋಷಿಸುವ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಫೋಗಟ್ ರಾಜೀನಾಮೆ ಸಲ್ಲಿಸಿದ ನಂತರ ರೈಲ್ವೆಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ರೈಲ್ವೆ ಅಧಿಕಾರಿಗಳು ಈ ಎಲ್ಲಾ ವಿಷಯಗಳಲ್ಲಿ ರಾಜಕೀಯ ಮಾಡಬಾರದು. ಅವರು(ಫೋಗಟ್ ಮತ್ತು ಪುನಿಯಾ) ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.