ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗದ ರಾಜ್ಕೋಟ್ ಕೋಟೆಯಲ್ಲಿ ಕಳೆದ ತಿಂಗಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪತನಕ್ಕೆ ಸಂಬಂಧಿಸಿದಂತೆ ಶಿಲ್ಪಿ-ಗುತ್ತಿಗೆದಾರ ಜಯದೀಪ್ ಆಪ್ಟೆಯನ್ನು ಮಹಾರಾಷ್ಟ್ರ ಪೊಲೀಸರು ಬುಧವಾರ ರಾತ್ರಿ ಥಾಣೆ ಜಿಲ್ಲೆಯ ಕಲ್ಯಾಣ್ನಿಂದ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
24 ವರ್ಷದ ಶಿಲ್ಪಿಯನ್ನು ಬಂಧಿಸಲು ಆಗಸ್ಟ್ 26 ರಿಂದ ಹುಡುಕಾಟ ನಡೆಸಲಾಗಿತ್ತು. ಅವರು ನಿರ್ಮಿಸಿದ ಪ್ರತಿಮೆಯು ಉದ್ಘಾಟನೆಯಾದ ಒಂಬತ್ತು ತಿಂಗಳ ನಂತರ ಕುಸಿದುಬಿತ್ತು. ಮಹಾರಾಷ್ಟ್ರದ ಸಿಂಧುದುರ್ಗ ಪೊಲೀಸರು ಶಿಲ್ಪಿ ಆಪ್ಟೆಗಾಗಿ ಶೋಧ ನಡೆಸುತ್ತಿದ್ದರು ಮತ್ತು ಆತನ ಪತ್ತೆಗೆ ಏಳು ತಂಡಗಳನ್ನು ರಚಿಸಿದ್ದರು.
ಪ್ರತಿಮೆಯ ಕುಸಿತದ ನಂತರ, ಮಾಲ್ವಾನ್ ಪೊಲೀಸರು ಶಿಲ್ಪಿ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ನಿರ್ಲಕ್ಷ್ಯ ಮತ್ತು ಇತರ ಸಂಬಂಧಿತ ಅಪರಾಧಗಳನ್ನು ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದಾರೆ. ಪಾಟೀಲ್ ಅವರನ್ನು ಕಳೆದ ವಾರ ಕೊಲ್ಲಾಪುರದಲ್ಲಿ ಬಂಧಿಸಲಾಗಿತ್ತು.