ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಲಾದ ಶಿಶು ಪಾಲನಾ ಕೇಂದ್ರಗಳ ಮಾದರಿಯಲ್ಲಿ ರಾಜ್ಯದ ನಗರ, ಪಟ್ಟಣ ಪ್ರದೇಶಗಳಲ್ಲಿ 10,000 ಮಕ್ಕಳ ಪಾಲನಾ ಕೇಂದ್ರ(ಕ್ರಶ್)ಗಳನ್ನು ಮುಂದಿನ ವರ್ಷಗಳಲ್ಲಿ ತೆರೆಯಲಾಗುವುದು.
ನಗರದಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ 10,000 ಕ್ರಶ್ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು, ಪ್ರಾಯೋಗಿಕವಾಗಿ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳ ಪಕ್ಕದಲ್ಲಿಯೇ ಮಕ್ಕಳ ಪಾಲನಾ ಕೇಂದ್ರಗಳನ್ನು ತೆರೆಯಲ್ಲಿದ್ದು, ಆರು ತಿಂಗಳಿನಿಂದ ಮೂರು ವರ್ಷದ ಮಕ್ಕಳನ್ನು ಪಾಲನೆ ಮಾಡಲಾಗುವುದು. ಮನೆ ಕೆಲಸ, ಕಾರ್ಖಾನೆ ಇತರ ಕೆಲಸಗಳಿಗೆ ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನು ಈ ಕೇಂದ್ರಗಳಲ್ಲಿ ಬಿಟ್ಟು ಹೋಗಬಹುದು ಎಂದು ತಿಳಿಸಿದ್ದಾರೆ.
ಮುಂದಿನ ವರ್ಷಗಳಲ್ಲಿ 17,000 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, 104 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ, ಯುಕೆಜಿ ಆರಂಭಿಸಲು ಉದ್ದೇಶಿಸಿದ್ದು, ಆಧುನಿಕ ಮಾದರಿಯಲ್ಲಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.