ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ, ಹಾವೇರಿ ವಿವಿ ಕುಲಸಚಿವರಾಗಿ ನೇಮಕವಾಗಿದ್ದ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ರಾಜ್ಯಪಾಲರ ಆದೇಶ ಅನುಸಾರ ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ. ದಿನೇಶ್ ಕುಮಾರ್ ಮುಡಾ ಅಕ್ರಮ ಪ್ರಕರಣದ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮುಡಾ ಆಯುಕ್ತ ಸ್ಥಾನದಿಂದ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ಅವರನ್ನು ಹಾವೇರಿ ವಿವಿ ಕುಲಸಚಿವ ಸ್ಥಾನದಿಂದ ಅಮಾನತು ಮಾಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವೂ ಇದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಮುಡಾ ಮಾಜಿ ಆಯುಕ್ತ ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಜಿ.ಟಿ. ಅವರನ್ನು ಹಾವೇರಿ ವಿವಿ ಕುಲಸಚಿವರಾಗಿ ನೇಮಕ ಮಾಡಲಾಗಿತ್ತು.
ಮುಡಾ ಹಗರಣ ಆರೋಪ ಕೇಳಿ ಬಂದ ಕೂಡಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವರ್ಗಾವಣೆಗೆ ಸೂಚಿಸಿದ್ದರು. ಸ್ಥಳ ನಿಯೋಜನೆ ಮಾಡದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ನಂತರ ಹಾವೇರಿ ವಿವಿ ಕುಲಸಚಿವರಾಗಿ ನೇಮಕ ಮಾಡಲಾಗಿತ್ತು. ಇದೀಗ ಅಮಾನತು ಮಾಡಲಾಗಿದೆ.